ಕುಂದಾಪುರ,ಜು 11 (Daijiworld News/MSP): ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗುವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದು ಪರಾರಿಯಾದ ಆತಂಕಕಾರಿ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ನಡೆದಿದೆ. ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ದಂಪತಿಗಳ ಒಂದೂಕಾಲು ವರ್ಷ ಪ್ರಾಯದ ಹೆಣ್ಣು ಮಗು ಸಾನ್ವಿಕಾ ನಾಯ್ಕ್ ಎಂಬಾಕೆಯೇ ಅಪಹರಣಕ್ಕೊಳಗಾದವಳು ಎಂದು ತಿಳಿದು ಬಂದಿದೆ.
ಕುಬ್ಜಾ ನದಿ
ಸಂತೋಷ್ ನಾಯ್ಕ್ ಹೊಸಂಗಡಿಯಲ್ಲಿರುವ ಪವರ್ ಪ್ರಾಜೆಕ್ಟ್ನಲ್ಲಿ ವಾಟರ್ಮೇನ್ ಆಗಿ ಕೆಲಸ ಮಾಡಿಕೊಂಡಿದ್ದು, ಬುಧವಾರ ರಾತ್ರಿ ಪಾಳಿಯಿತ್ತೆನ್ನಲಾಗಿದೆ. ಆದ್ದರಿಂದ ಸಂತೋಷ್ ನಾಯ್ಕ್ ಮನೆಯಲ್ಲಿರಲಿಲ್ಲ. ಆತನ ಪತ್ನಿ ರೇಖಾ ನಾಯ್ಕ್ ಹಾಗೂ ಒಬ್ಬ ಮಗ ಸಾತ್ವಿಕ್ ನಾಯ್ಕ್ ಮತ್ತು ಮಗಳು ಸಾನ್ವಿಕಾ ಮೂವರೇ ಮನೆಯಲ್ಲಿದ್ದರು.
ಗುರುವಾರ ಮುಂಜಾನೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಲ್ಲಿ ಒಳನುಗ್ಗಿದ ಬೂದು ಬಣ್ಣದ ಅಂಗಿ ಧರಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡಿದ್ದಾನೆ ಎನ್ನಲಾಗಿದೆ. ಮಗು ಅಳುವುದನ್ನು ಕೇಳಿಸಿಕೊಂಡ ನಿದ್ದೆಯ ಮಂಪರಿನಲ್ಲಿದ್ದ ತಾಯಿ ರೇಖಾ ನಾಯ್ಕ್ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ವ್ಯಕ್ತಿ ಮಗುವನ್ನು ಹೊತ್ತುಕೊಂಡು ಪರಾರಿಯಾಗಿದ್ದು, ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿರುವುದಾಗಿ ತಾಯಿ ತಿಳಿಸಿದ್ದಾಳೆ.
ಮಗುವನ್ನು ಹೊತ್ತುಕೊಂಡು ಓಡುತ್ತಿದ್ದ ವ್ಯಕ್ತಿಯ ಹಿಂದೆಯೇ ತನ್ನ ಗಂಡು ಮಗುವನ್ನು ಎತ್ತಿಕೊಂಡು ಓಡಿದ್ದ ತಾಯಿ ಅಪರಿಚಿತ ದುಷ್ಕರ್ಮಿಯನ್ನು ಹಿಂಬಾಲಿಸಿ ಹೊಳೆಗೆ ಹಾರಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಅದೃಷ್ಟವಶಾತ್ ಕೆಳಗಡೆ ದಡ ಸೇರಿರುವುದಾಗಿ ಆಕೆ ಹೇಳಿದ್ದಾಳೆ. ಮಗುವನ್ನು ಕದ್ದೊಯ್ದ ಕಿರಾತಕ ಯಾರು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ನಿಜವಾಗಿಯೂ ಅಪಹರಣ ನಡೆದಿದೆಯೆ ಅಥವಾ ಬೇರೇನಾದರೂ ನಡೆದಿರಬಹುದೇ ಎನ್ನುವ ಅನುಮಾನಗಳೂ ಇದೀಗ ಸ್ಥಳೀಯರಲ್ಲಿ ಕಾಡಲಾರಂಭಿಸಿದೆ. ಘಟನಾ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್, ಡಿವೈಎಸ್ಪಿ ದಿನೇಶ್ಕುಮಾರ್ ಬಿ.ಪಿ ಆಗಮಿಸಿ ತನಿಖೆ ನಡೆಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.