ಮಂಗಳೂರು, ಜು11(Daijiworld News/SS): ಇಸ್ರೇಲ್ನಲ್ಲಿ ಉದ್ಯೋಗಿಯಾಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಮುಂಬಯಿ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರಾದವರನ್ನು ಇಸ್ರೇಲ್ನಲ್ಲಿ ಉದ್ಯೋಗಿಯಾಗಿದ್ದ ಮಂಗಳೂರು ಮೂಲದ ವಿಲಿಯಂ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ತೀವ್ರ ಬೆನ್ನುನೋವಿನಿಂದ ನರಳುತ್ತಿದ್ದ ವಿಲಿಯಂ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗುತ್ತಿತ್ತು. ಜು.8ರ ಬೆಳಗ್ಗೆ 7.30ಕ್ಕೆ ಅವರನ್ನು ಅವರ ಗೆಳೆಯ ಅರುಣ್ ಫೆರ್ನಾಂಡಿಸ್ ಅವರು ಮುಂಬೈ ಏರ್ಪೋರ್ಟ್ಗೆ ಕರೆತಂದಿದ್ದರು. 10.25ಕ್ಕೆ ಅವರಿಗೆ ಮಂಗಳೂರಿಗೆ ಏರ್ಇಂಡಿಯಾ ಕನೆಕ್ಟಿಂಗ್ ವಿಮಾನವಿತ್ತು. ಆದರೆ ಬುಕಿಂಗ್ ಹೆಚ್ಚಿದೆ ಎನ್ನುವ ಕಾರಣ ನೀಡಿ ಏರ್ಲೈನ್ ಸಂಸ್ಥೆ ಬೋರ್ಡಿಂಗ್ ಪಾಸ್ ನೀಡಿರಲಿಲ್ಲ. ಜು.9ರಂದು ಬೆಳಗ್ಗೆ ಕಾರಿನಲ್ಲಿ ಏರ್ಪೋರ್ಟ್ಗೆ ಬರುತ್ತಿದ್ದ ಫೆರ್ನಾಂಡಿಸ್ ಅವರಿಗೆ ವೀಲ್ಚೇರ್ ತರಲು ಅವರ ಗೆಳೆಯ ಹೊರಗೆ ಹೋದ ವೇಳೆ ಕುಸಿದು ಬಿದ್ದು ಫೆರ್ನಾಂಡಿಸ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಪಡೀಲು ನಿವಾಸಿಯಾದ ಫೆರ್ನಾಂಡಿಸ್ ಹಲವು ವರ್ಷಗಳಿಂದ ದುಬೈ ಹಾಗೂ ಆ ಬಳಿಕ ಇಸ್ರೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಪತ್ನಿ, ಮಕ್ಕಳು ಇರುವ ಕುಟುಂಬ ಮಂಗಳೂರಿನಲ್ಲಿ ನೆಲೆಸಿದೆ, ಕೆಲ ತಿಂಗಳ ಹಿಂದೆಯಷ್ಟೇ ಮಂಗಳೂರಿನ ಮನೆಗೆ ಬಂದು ಹೋಗಿದ್ದರು ಎನ್ನಲಾಗಿದೆ.