ಮಂಗಳೂರು, ಜು11(Daijiworld News/SS): ನಗರದ ಶರಬತ್ಕಟ್ಟೆ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹತ್ತಿರಕ್ಕೆ ಕರೆದು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂದೂರು ಮರ್ಕೆರಾ ಹಿಲ್ಸ್ ನಿವಾಸಿ ಡೆವಿನ್ ಪಿಂಟೊ (29) ಬಂಧಿತ ಆರೋಪಿ.
ಜು.10ರಂದು 7 ಗಂಟೆ ಸುಮಾರಿಗೆ ಈತ ಶರಬತ್ಕಟ್ಟೆ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಹತ್ತಿರಕ್ಕೆ ಕರೆದಿದ್ದ. ಸಹಾಯ ಯಾಚಿಸಬಹುದು ಎಂದು ತಿಳಿದು ಯುವತಿ ಆತನ ಸಮೀಪ ಹೋಗಿದ್ದರು. ಆಗ ಮೊಬೈಲ್ನಿಂದ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿದ್ದ. ಯುವತಿ ಕೂಗಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದರು. ಬಳಿಕ ಯುವತಿ ನಡೆದ ಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾಳೆ.
ಕೂಡಲೇ ಸಾರ್ವಜನಕರು ಆರೋಪಿಯನ್ನು ಹಿಡಿದು ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರ ವಶಕ್ಕೆ ನೀಡಿದರು. ಯುವತಿ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.