ಕಾರ್ಕಳ, ಜು 10 (DaijiworldNews/SM): ಮುಡಾರು ಗ್ರಾಮದ ಬಜಗೋಳಿಯ ನಿವಾಸಿ ನಾಸಿರಾ ಭಾನು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರು ಕುಲೀನ ಕುಟುಂಬದಲ್ಲಿ ಜನಿಸಿದ್ದು, ಕಾರು ಚಾಲಕ ವೃತ್ತಿಯಲ್ಲಿ ದುಡಿಯುತ್ತಿರುವ ಅಲಿಯಬ್ಬ ಮತ್ತು ನೆಬಿಸಾ ಅವರ ಒಬ್ಬ ಗಂಡು ಮೂವರು ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗಳಾಗಿದ್ದಾರೆ.
ಸಿವಿಲ್ ನ್ಯಾಯಧೀಶ ಹುದ್ದೆಗೆ ಇತ್ತೀಚೆಗೆ ನಡೆದ ಎರಡನೇ ಹಂತದ ಪರೀಕ್ಷೆ ಮತ್ತು ಆ ಬಳಿಕ ನಡೆದ ಸಂದರ್ಶನದಲ್ಲಿ ಒಟ್ಟಾರೆ ಮೂರು ಹಂತದಲ್ಲಿ ಇವರು ಆಯ್ಕೆಯಾಗಿರುವುದು ಗಮನಾರ್ಹವಾಗಿದೆ. ಇನ್ನೂ ಎರಡು ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಿದೆ.
ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯನ್ನು ಪೂರ್ತಿಗೊಳಿಸಿದ ನಾಸಿರಾ, ಬಳಿಕ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಕಾರ್ಕಳದ ಕೆ.ವಿಜೇಂದ್ರ ಕುಮಾರ್ ಅವರ ಬಳಿ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಜಿ. ಮುರಳೀಧರ ಭಟ್ ಅವರ ಬಳಿಯಲ್ಲಿ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿವಿಲ್ ನ್ಯಾಯಾಧೀಶರ ಹುದ್ದೆಗಾಗಿ ಇತ್ತೀಚೆಗೆ ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ 2074 ಅಭ್ಯರ್ಥಿಗಳು ಹಾಜರಾಗಿದ್ದರು. ಕೊನೆಯ ಸಂದರ್ಶನ ಕರೆ ಪಡೆದ 52 ಮಂದಿಯಲ್ಲಿ ಒಬ್ಬರಾಗಿ ಇವರು ಗುರುತಿಸಿಕೊಂಡಿದ್ದಾರೆ. ಆ 52 ಮಂದಿಯಿಂದ ಆಯ್ಕೆಯಾದ 15 ಮಂದಿ ಯ ಪಟ್ಟಿಯಲ್ಲೂ ಕೂಡ ನಾಸಿರಾ ಅವರ ಹೆಸರು ಉಳಿದುಕೊಂಡಿದ್ದು, ಕರಾವಳಿಗೆ ಹಿರಿಮೆಯ ಗರಿಯನ್ನು ತಂದುಕೊಂಟ್ಟಿದ್ದಾರೆ.