ಕಾಸರಗೋಡು, ಜು 10 (Daijiworld News/MSP): ಕಾಸರಗೋಡಿನ ಬ್ಯಾಂಕ್ ನ ಲಾಕರ್ ನಲ್ಲಿ ಇರಿಸಲಾಗಿದ್ದ 80 ಪವನ್ ಚಿನ್ನಾಭರಣ ಕಣ್ಮರೆಯಾಗಿದ್ದು ಆ ಬಳಿಕ ಚಿನ್ನಾಭರಣ ಅದೇ ಬ್ಯಾಂಕ್ ನ ಕಸದ ಡಬ್ಬದಲ್ಲಿ ಮಂಗಳವಾರ ಪತ್ತೆಯಾದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಕಳೆದ ಒಂದು ವರ್ಷದ ಹಿಂದೆ ಆಲಂಪಾಡಿ ನಿವಾಸಿ ಸೈನಬಾ ಎಂಬವರು ಲಾಕರ್ ನ ಒಂದು ಪೆಟ್ಟಿಗೆಯಲ್ಲಿ 80 ಹಾಗೂ ಇನ್ನೊಂದರಲ್ಲಿ 35 ಪವನ್ ಒಳಗೊಂಡಂತೆ ಒಟ್ಟು 115 ಪವನ್ ಚಿನ್ನವನ್ನು ಬ್ಯಾಂಕ್ ಲಾಕರಿನಲ್ಲಿ ಇರಿಸಿದ್ದರು. ಆದರೆ ಶನಿವಾರ ತೆರೆದಾಗ 80 ಪವನ್ ಚಿನ್ನ ನಾಪತ್ತೆಯಾಗಿತ್ತು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನದಿಂದ ಹುಡುಕಾಟ ನಡೆಸಿದರೂ ಚಿನ್ನ ಲಭಿಸದಿದ್ದಾಗ ಬ್ಯಾಂಕ್ ನ ವಿಶೇಷ ತಂಡ ಕೋಯಿಕ್ಕೋಡ್ ನಿಂದ ಆಗಮಿಸಿ ತಪಾಸಣೆಗೆ ಮುಂದಾಗುತ್ತಿದ್ದಂತೆ ಚಿನ್ನ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದೆ
ಪತ್ತೆಯಾದ ಆಭರಣವನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರ ಉಪಸ್ಥಿತಿಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಚಿನ್ನ ನಾಪತ್ತೆ ಪ್ರಕರಣದ ಸಮಗ್ರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.