ಮಂಗಳೂರು, ಜು10(Daijiworld News/SS): ಡ್ರಗ್ಸ್ - ಗಾಂಜಾ, ಕ್ರಿಕೆಟ್ ಬೆಟ್ಟಿಂಗ್ ಸಹಿತ ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಇದೀಗ ಸಾಮಾಜಿಕ ಜಾಲತಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುತ್ತಿರುವ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಭಿನಂದಿಸಿದ್ದಾರೆ.
ಪೊಲೀಸರು ಸಾರ್ವಜನಿಕರ ಸ್ನೇಹಿಯಾಗುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವ ಸಲುವಾಗಿ ಅಳವಡಿಸಿರುವ ಡಿಜಿಟಲ್ ಡಿಸ್'ಪ್ಲೇಗಳಲ್ಲಿ ಹಾಕಿರುವ ಇಮೇಲ್ ಐಡಿ ವಿಳಾಸಕ್ಕೆ ಅಥವಾ ದೂರವಾಣಿ (9480802300) ಸಂಖ್ಯೆಗೆ ವಾಟ್ಸಪ್ ಮಾಡಿ ಯಾವುದೇ ಅಪರಾಧ ನಡೆದಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ, ಅದನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಲು ಪೊಲೀಸ್ ಕಮೀಷನರ್ ಮಾಡಿರುವ ಮನವಿಗೆ ಜನ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನಮ್ಮ ಮಂಗಳೂರು ನಗರವನ್ನು ಅಪರಾಧಮುಕ್ತ ಮಾಡಲು ಇಲ್ಲಿನ ಎಲ್ಲಾ ಜನರು ಮುಂದೆ ಬಂದು ಜನಪ್ರತಿನಿಧಿ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಜೊತೆಗೆ ಡ್ರ್ಸಗ್ಸ್ ಜಾಲವನ್ನು ನಮ್ಮ ನಗರದಿಂದ ಓಡಿಸಲು ಸಲಹೆ ಸೂಚನೆಗಳು ಇದ್ದಲ್ಲಿ ನಾಗರಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತಿಳಿಸಬೇಕು ಎಂದು ಶಾಸಕ ಕಾಮತ್ ಜನರಲ್ಲಿ ಮನವಿ ಮಾಡಿದ್ದಾರೆ.