ಮಂಗಳೂರು,ಜು 10 (Daijiworld News/MSP): ವೈದ್ಯರ ನಿರ್ಲಕ್ಷ್ಯಕ್ಕೆ ನೋವಿದ್ದ ಎಡಕಾಲಿನ ಬದಲು ಬಲಕಾಲಿಗೆ ಆಪರೇಶನ್ ಮಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಕಾಸರಗೋಡು ಮೂಲದ ಮಹಿಳೆಯೊಬ್ಬರು ಎಡಕಾಲಿನ ನೋವಿನಿಂದ ಬಳಲುತ್ತಿದ್ದು ಇದಕ್ಕಾಗಿ ನಗರದ ಖಾಸಗಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಸಂದರ್ಭ ವೈದ್ಯರು ಅವರನ್ನು ತಪಾಸಣೆ ನಡೆಸಿ ಆ ಬಳಿಕ ಆಪರೇಷನ್ ಗಾಗಿ ಥಿಯೇಟರ್ಗೆ ಕರೆದೊಯ್ಯಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ಮಾಡಿ ಮರಳಿ ಬರುವಾಗ ನೋವಿನ ಎಡಕಾಲಿನ ಬದಲು ಬಲಕಾಲಿಗೆ ಆಪರೇಷನ್ ಮಾಡಲಾಗಿತ್ತು.
ಇದನ್ನು ಕಂಡ ಮಹಿಳೆಯ ಕುಟುಂಬಸ್ಥರಿಗೆ ಅಘಾತವಾಗಿದ್ದು ತಕ್ಷಣ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಆಸ್ಪತ್ರೆ ಸೂಕ್ತ ಪರಿಶೀಲನೆ ನಡೆಸಿದಾಗ ಕಿರಿಯ ವೈದ್ಯರು ಮಾಡಿರುವ ಎಡವಟ್ಟು ಕಾರಣ ಎಂದು ತಿಳಿದುಬಂದಿದೆ.
ಈ ವಿಚಾರ ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ಬಂದ ತಕ್ಷಣ, ಹಿರಿಯ ವೈದ್ಯರು ಆಗಮಿಸಿ ಮಹಿಳೆಯ ಕುಟುಂಬಸ್ಥರ ಬಳಿ ಕ್ಷಮೆಯಾಚಿಸಿದ್ದಾರೆ. ಜತೆಗೆ ಮಹಿಳೆಯ ಆಸ್ಪತ್ರೆಯ ಖರ್ಚು, ವೆಚ್ಚ ಸೇರಿದಂತೆ ಆದ ಎಡವಟ್ಟಿಗೆ ಪರಿಹಾರವನ್ನು ನೀಡುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ. ಕೊನೆಗೆ ಮಾತುಕತೆ ಮೂಲಕ ಕುಟುಂಸ್ಥರುಕರು ಕೂಡಾ ಪ್ರಕರಣವನ್ನು ರಾಜಿ ಸಂಧಾನದಲ್ಲಿ ಮುಗಿಸಿದ್ದಾರೆ.