ಮಂಗಳೂರು, ಜು10(Daijiworld News/SS): ನಗರದ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸಲು ವಿಫಲವಾಗಿದ್ದಲ್ಲದೆ, ಠಾಣೆಯಲ್ಲಿ ಕರ್ತವ್ಯಲೋಪವೆಸಗಿದ ಆರೋಪದಡಿ ಸುರತ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣರನ್ನು ಅಮಾನತುಪಡಿಸಿ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ, ದನಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕಮಿಷನರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೆ ಕರ್ತವ್ಯಲೋಪವೆಸಗಿದ್ದರು ಎನ್ನಲಾಗಿದೆ.
ಜೊತೆಗೆ ಹಣಕಾಸು ಸಂಸ್ಥೆಯೊಂದು ವಂಚನೆ ಮಾಡಿದ ಆರೋಪದಲ್ಲಿ ಸಾರ್ವಜನಿಕರು ಠಾಣೆಗೆ ದೂರು ನೀಡಲು ಬಂದಾಗ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಕೇಸು ದಾಖಲಿಸದೆ ದೂರುದಾರರನ್ನು ಹಿಂದಕ್ಕೆ ಕಳುಹಿಸಿದ್ದರು. ಈ ವಿಚಾರ ಕಮಿಷನರ್ ಅವರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.