ಬೆಳ್ತಂಗಡಿ, ಜು 09 (DaijiworldNews/SM): ನಿರ್ವಾಹಕನೋರ್ವ ಬಸ್ನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ದಾರುಣ ಘಟನೆ ತಾಲೂಕಿನ ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೂಲತಃ ಸಾಗರದ ಚೂರಿಕಟ್ಟೆ ಸಾಲಗೊಪ್ಪ ನಿವಾಸಿ ಶ್ರೀನಿವಾಸ್ ಎಸ್(54) ಮೃತಪಟ್ಟವರು.
ಬೆಳ್ತಂಗಡಿಯಿಂದ ಮೂಡುಬಿದರೆಗೆ ತೆರಳುವ ಖಾಸಗಿ ಬಸ್ ಗುರವಾಯನಕೆರೆ ಬಸ್ ನಿಲ್ದಾಣದಲ್ಲಿ ಪ್ರಾಯಾಣಿಕರನ್ನು ಇಳಿಸಿದೆ. ಬಳಿಕ ನಿರ್ವಾಹಕ ಸೂಚನೆಯಿಲ್ಲದೆ ಚಾಲಕ ಏಕಾಏಕಿ ಬಸ್ ಚಲಾಯಿಸಿದ್ದರಿಂದ ಕೈ ತಪ್ಪಿ ನಿರ್ವಾಹಕ ಶ್ರೀನಿವಾಸ್ ನೆಲಕ್ಕೆ ಬಿದ್ದಿದ್ದಾರೆ.
ಘಟನೆಯಲ್ಲಿ ನಿರ್ವಾಹಕರ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ನಿರ್ಲಕ್ಷ್ಯದ ಚಾಲನೆ ವಿರುದ್ಧ ಚಾಲಕ ಮೂಲ್ಕಿ ನಿವಾಸಿ ಮುಸ್ತಾಫ(29) ಎಂಬುವನ ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.