ವಿಟ್ಲ, ಜು 09 (DaijiworldNews/SM): ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹಿತ ಐವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಗ್ರಾಮ ಪಂಚಾಯತ್ನ ತೆರಿಗೆ ಸಂಗ್ರಹಕ ಕೃಷ್ಣಾ ನಾಯ್ಕ್, ಆಟೊ ಚಾಲಕ ಧನುಷ್ ನಾಯ್ಕ್ ಹಾಗೂ ಗಣೇಶ್ ಎಂಬವರನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಟ್ಲದ ನಿವಾಸಿ, ದಲಿತ ಬಾಲಕಿ ಸಂತ್ರಸ್ಥೆಯಾಗಿದ್ದು, ಈಕೆಯ ಮೇಲೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೃಷ್ಣಪ್ಪ, ಆಟೋ ಚಾಲಕ ಧನುಷ್, ಗಣೇಶ್, ಪವನ್ ಹಾಗೂ ಪುನೀತ್ ಎಂಬವರು ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ಥ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಗಣೇಶ ಎಂಬಾತನು ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿ ಎರಡು ದಿನಗಳ ಕಾಲ ಲಾಡ್ಜ್ವೊಂದರಲ್ಲಿ ಉಳಿಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ವಿವರಿಸಲಾಗಿದೆ.
ಅದಲ್ಲದೆ, ಈ ವರ್ಷದ ಮಾರ್ಚ್ 9ರಂದು ಗಣೇಶ ಎಂಬಾತನು ಮತ್ತೊಮ್ಮೆ ಪೂಜೆಯ ನೆಪದಲ್ಲಿ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಲಾಡ್ಜ್ನಲ್ಲಿ 2 ದಿನ ತಂಗಿದ್ದು, ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಮುಡ್ನೂರು ಗ್ರಾಮದವನಾಗಿರುವ ಕೃಷ್ಣಪ್ಪ ಎಂಬಾತನು ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಅತ್ಯಾಚಾರವೆಸಗಿರುವುದಾಗಿ ಸಂತ್ರಸ್ಥೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು ಆರೋಪಿ ಪವನ್, ಆಟೋ ಚಾಲಕ ಧನುಷ್ ಹಾಗೂ ಪುನೀತ್ ಎಂಬ ಆರೋಪಿಗಳು ಕೂಡ ಮನೆಗೆ ಬಂದು ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆ ಬಾಲಕಿಯ ಮೇಲೆ ಐವರು ಆರೋಪಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ಥ ಬಾಲಕಿಯ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.