ಕುಂದಾಪುರ, ಜು 07 (Daijiworld News/MSP): ಸಮುದ್ರದ ತೀರದಲ್ಲಿ ನಿಂತ ಸುಮಾರು ಮೂವತ್ತೆರಡು ಪ್ರಾಯದ ಯುವಕನೊಬ್ಬ ನೀರಿಗಿಳಿದ ಬೆನ್ನಲ್ಲೇ ಅಲೆಗಳಬ್ಬರಕ್ಕೆ ಕೊಚ್ಚಿ ಹೋದ ಘಟನೆ ಜು.7 ರ ಭಾನುವಾರ ಮಧ್ಯಾಹ್ನ ಮರವಂತೆ ಬೀಚಿನಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ ಯುವಕನನ್ನು ಕುಂದಾಪುರ ತಾಲೂಕಿನ ಚಿತ್ತೂರು ನಿವಾಸಿ ಎನ್ನಲಾಗಿದೆ. ಈ ಘಟನೆ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಯುವಕನ ಮೃತದೇಹ ಪತ್ತೆಯಾಗಿದ್ದು ಜೇಬಿನಲ್ಲಿ ಮೂರು ಮೊಬೈಲ್ ಸಂಖ್ಯೆಗಳನ್ನು " ಪ್ಲೀಸ್ ಕಾಂಟ್ಯಾಕ್ಟ್ " ಎಂದು ಬರೆದು ಪ್ಲಾಸ್ಟಿಕ್ ನಲ್ಲಿ ಸುತ್ತಿ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದು ಮನೆಯವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.