ಬಂಟ್ವಾಳ, ಜು 07 (Daijiworld News/MSP): ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ 4೬ ವರ್ಷಗಳಿಂದ ಉದಯ ಲಾಂಡ್ರಿ ನಡೆಸುತ್ತಿರುವ ಪ್ರಗತಿಪರ ಕೃಷಿಕ ತನಿಯಪ್ಪ ಮಡಿವಾಳ ಇವರ ಪುತ್ರ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿ ಇದೇ 7ರಂದು ಎರಡು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಬಂಟ್ವಾಳದ ಸಜೀಪದಲ್ಲಿರುವ ಶರತ್ ಮಡಿವಾಳರ ಮನೆಯ ಸಮೀಪವಿರುವ ಶರತ್ ಮಡಿವಾಳ ಅವರ ನೆನಪಿಗಾಗಿ ನಿರ್ಮಾಣವಾಗಿರುವ ಸ್ಮಾರಕಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಳೆದ ಒಂದು ವರ್ಷದ ಹಿಂದೆ ಶರತ್ ಮಡಿವಾಳ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ಥಳೀಯ ಸಜಿಪಮುನ್ನೂರು ಶರತ್ ಅಭಿಮಾನಿಗಳು ಮತ್ತು ಆರ್ಎಸ್ಎಸ್ ಕಾರ್ಯಕರ್ತರ ತಂಡ ಅವರ ಸವಿನೆನಪಿಗಾಗಿ ಆಕರ್ಷಕ ಸ್ಮಾರಕ ನಿರ್ಮಿಸಿತ್ತು.
ಶೃದ್ದಾಂಜಲಿ ಸಲ್ಲಿಸಿದ ಬಳಿಕ, ಮೃತ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಹಾಗೂ ತಾಯಿಗೆ ಸಂತ್ವಾನ ಹೇಳಿ ಮಾತುಕತೆ ನಡೆಸಿದರು.
೨೦೧೭ ರ ಜೂನ್ ತಿಂಗಳಲ್ಲಿ ಕಲ್ಲಡ್ಕ ಮತ್ತು ಮೆಲ್ಕಾರ್ ನಲ್ಲಿ ನಡೆದ ಚಾಕು ಇರಿತ ಸೇರಿದಂತೆ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಮತ್ತು ಅಮ್ಮುಂಜೆ ಎಸ್ಡಿಪಿಐ ವಲಯಾಧ್ಯಕ್ಷ ಆಶ್ರಫ್ ಕಲಾಯಿ ಹತ್ಯೆ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಘೋಷಿಸಲಾಗಿತ್ತು. ಜುಲೈ 4ರಂದು ರಾತ್ರಿ ಸುಮಾರು 9.20 ಗಂಟೆಗೆ ಬಿ.ಸಿ.ರೋಡಿನಲ್ಲಿ ಲಾಂಡ್ರಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದ ಶರತ್ನನ್ನು ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿತ್ತು. ಗಂಭೀರ ಗಾಯಗೊಂಡು ಲಾಂಡ್ರಿಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ನನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಜುಲೈ6ರಂದು ರಾತ್ರಿ 8.30ಕ್ಕೆ ಅವರು ಮೃತಪಟ್ಟ ಬಗ್ಗೆ ಎಂದು ಘೋಷಿಸಲಾಗಿತ್ತು.