ಉಡುಪಿ, ಜು 07 (Daijiworld News/MSP): ಏಕಾಂಕಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆಯೋರ್ವಳನ್ನು ಕೊಲೆಗೈದು, ಚಿನ್ನಾಭರಣ ದೋಚಿದ ಘಟನೆ ಉಡುಪಿ ಠಾಣಾ ವ್ಯಾಪ್ತಿಯ ಪುತ್ತೂರು ಸುಬ್ರಮಣ್ಯ ನಗರದಲ್ಲಿ ಬೆಳಕಿಗೆ ಬಂದಿದೆ.
ಸುಬ್ರಮಣ್ಯ ದೇವಸ್ಥಾನದ ಸಮೀಪದ 5 ನೇ ಕ್ರಾಸ್ ನಿವಾಸಿ ರತ್ನಾವತಿ ಜಿ.ಶೆಟ್ಟಿ (80) ಕೊಲೆಯಾದವರು. ಜುಲೈ 2 ರಿಂದ 5 ರ ನಡುವೆ ಈ ಘಟನೆ ನಡೆದಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆ ಹಿಂಭಾಗದಿಂದ ಪ್ರವೇಶಿದ ಆರೋಪಿಗಳು ಬೆಡ್ ರೂಂ ಹಾಗೂ ಹಾಲ್ ನಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಏನೂ ಸಿಗದಿದ್ದಾದ ವೃದ್ಧೆಯನ್ನು ಮಾರಕಯುಧದಿಂದ ಹೊಡೆದು ಅವರ ಕುತ್ತಿಗೆಯಲ್ಲಿದ್ದ ಸರ, ಕಿವಿಯ ಬೆಂಡೋಲೆ, ಕೈಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ಜು.5 ರ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದ್ದು, ನಾಲ್ಕು ದಿನದ ಹಿಂದೆಯೇ ಈ ಘಟನೆ ನಡೆದಿರಬಹುದು ಎಂದು ಮೃತ ರತ್ನಾವತಿ ಅವರ ಪುತ್ರಿ ಸುಪ್ರಭಾ ದೂರಿನಲ್ಲಿ ತಿಳಿಸಿದ್ದಾರೆ. ಇವರ ಮನೆ ಬಾಡಿಗೆಂದು ಬಂದಿದ್ದ ನವಜೋಡಿಯ ಮೇಲೆ ಕೊಲೆ ನಡೆಸಿದ ಶಂಕೆ ಮೂಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.