ಮಂಗಳೂರು, ಜು06(Daijiworld News/SS): ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶುಕ್ರವಾರ ನಗರದ ಪ್ರಮುಖ ಸ್ಥಳಗಳಿಗೆ ತೆರಳಿ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವ ಪ್ರದೇಶವನ್ನು ಪರಿಶೀಲಿಸಿದ್ದಾರೆ.
ನಗರದ ಹಂಪನಕಟ್ಟೆಯಿಂದ ಫಳ್ನೀರ್ ಆಗಿ ಕಂಕನಾಡಿ ಸರ್ಕಲ್'ವರೆಗೆ ಸೇರುವ ರಸ್ತೆಯನ್ನು ಒಟ್ಟು ಹದಿನೆಂಟು ಮೀಟರ್ (ರಸ್ತೆಯ ಮಧ್ಯದಿಂದ ಎರಡು ಪಾಶ್ವದಲ್ಲಿ ತಲಾ 9 ಮೀಟರ್) ಅಗಲಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಯೋಜನೆ ಜಾರಿಯಲ್ಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಅನೇಕ ಕಡೆ ರಸ್ತೆಯ ಅಗಲೀಕರಣಕ್ಕೆ ಹಲವಾರು ಜನ ಜಾಗ ಬಿಟ್ಟುಕೊಟ್ಟಿದ್ದರೂ, ಒಂದಷ್ಟು ಕಡೆ ಕೆಲವರ ಅಸಹಕಾರದಿಂದ ಕಾಮಗಾರಿ ಮುಂದುವರೆದಿರುವುದಕ್ಕೆ ಅಡ್ಡಿ ಉಂಟಾಗಿದೆ. ಈ ನಿಟ್ಟಿನಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಈ ಪ್ರದೇಶಕ್ಕೆ ತೆರಳಿ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವ ಸ್ಥಳವನ್ನು ಪರಿಶೀಲಿಸಿದರು.
ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಾಗ ಸ್ವಾಧೀನಕ್ಕೆ ಬಿಟ್ಟುಕೊಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಶಾಸಕರ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ನಿರಾಂತಕವಾಗಿ ನಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ವೇಳೆ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಪಾಲಿಕೆ ತಾಂತ್ರಿಕ ಸಲಹೆಗಾರರಾದ ಧರ್ಮರಾಜ್, ಮನಪಾ ಜಂಟಿ ನಿರ್ದೇಶಕ ಜಯರಾಜ್, ನಗರ ಯೋಜನಾ ಅಧಿಕಾರಿ ಬಾಲಕೃಷ್ಣ ಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಜ್ಯೂನಿಯರ್ ಇಂಜಿನಿಯರ್ ಗಣಪತಿ, ಸಹಾಯಕ ನಗರ ಯೋಜನಾ ಅಧಿಕಾರಿ ಅಶೋಕ್, ಬಿಜೆಪಿ ಮುಖಂಡರಾದ ರಂಗನಾಥ ಕಿಣಿ, ವಸಂತ ಪೂಜಾರಿ, ಅಶ್ವಿನ್ ರಾವ್, ದಯಾನಂದ ಸನ್ಯಾಸಿಗುಡ್ಡ, ಅನಿಲ್ ಅತ್ತಾವರ್, ಪ್ರವೀಣ್ ಶೇಟ್, ವಿಶ್ವನಾಥ ಸನ್ಯಾಸಿಗುಡ್ಡ ಸಹಿತ ಅನೇಕ ಕಾರ್ಯಕರ್ತರು, ನಾಗರಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.