ಉಡುಪಿ, ಜು 06 (Daijiworld News/MSP): ಬಿಜೆಪಿ ಸಿದ್ಧಾಂತ ಹಾಗೂ ಮೋದಿ ಅವರ ನಾಯಕತ್ವವನ್ನು ಒಪ್ಪಿ ಯಾರೇ ಆದ್ರೂ ಕೂಡಾ ನಮ್ಮ ಪಕ್ಷಕ್ಕೆ ಬರಬಹುದು. ಶಾಸಕರು ನೀಡಿದ ರಾಜೀನಾಮೆ ಸ್ವೀಕೃತವಾದರೆ ಅವರೆಲ್ಲರೂ ಬಿಜೆಪಿಗೆ ಬರಬಹುದು ಎಂದು ರಾಜೀನಾಮೆ ನೀಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬಿಜೆಪಿ ಸೇರಲು ಸಂಸದೆ ಶೋಭಾ ಕರಂದ್ಲಾಜೆ ಮುಕ್ತ ಅಹ್ವಾನ ನೀಡಿದ್ದಾರೆ.
ಅವರು ಶನಿವಾರ ಉಡುಪಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಮಾತನಾಡಿ, ಜಿ.ಟಿ ದೇವೇಗೌಡ ಹಿಂದೆ ನಮ್ಮ ಜೊತೆ ಇದ್ದರು. ಅಲ್ಲಿ ಬೇಸರ ಆದ್ರೆ ಯಾವತ್ತೂ ಜಿಟಿಡಿ ಬಿಜೆಪಿಗೆ ಬರಬಹುದು. ಪ್ರಧಾನಿ ಮೋದಿಯವರ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಸರ್ಕಾರ ರಾಜ್ಯದಲ್ಲಿ ಅಡಳಿತಕ್ಕೆ ಬರಬೇಕಾಗಿದೆ ಹೀಗಾಗಿ ರಾಜೀನಾಮೆ ಸ್ವೀಕಾರವಾದರೆ ಬಿಜೆಪಿಗೆ ಬರಬಹುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಕಡೆ ಕೈ ತೋರಿಸಬೇಡಿ ಸರಕಾರ ಬೀಳೋಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ ಅವರು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದ ಆಂತರಿಕ ಗೊಂದಲ ಬಹಿರಂಗವಾಗಿದೆ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ನಡುವಿನ ಒಳ ಜಗಳವೇ ಕಾರಣವಾಗಿದೆ. ಶಾಸಕ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನ ಕೆಲ ಶಾಸಕರನ್ನು ಸರ್ಕಾರದ ವಿರುದ್ದ ಎತ್ತಿಕಟ್ಟಿದ್ದಾರೆ. ಹೀಗಾಗಿ ಮೈತ್ರಿ ಸರಕಾರ ಬಿದ್ದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನೇರ ಕಾರಣವಾಗುತ್ತಾರೆ ಎಂದು ಆರೋಪಿಸಿದರು.