ಕಾರ್ಕಳ, ಜು 06 (Daijiworld News/MSP): ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಾಣೂರು ಚಿಲಿಂಬಿಯಲ್ಲಿ ವಾಹನಗಳ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸುಮಾರು 10ಕ್ಕೂ ಮಿಕ್ಕಿ ಅಪಘಾತಗಳು ಜೂನ್ ತಿಂಗಳಿನಲ್ಲಿ ನಡೆದಿದೆ. ರಾಜಿಯಲ್ಲಿ ಇತ್ಯರ್ಥವಾದುದರಿಂದ ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.
ಒಂದು ತಿಂಗಳಿನಲ್ಲಿ ನಡೆದ ಹಲವು ಅಪಘಾತಗಳು
ಸುಗಮ ಸಂಚಾರಕ್ಕೆ ವಿಸ್ತರಣೆಗೊಂಡ ರಸ್ತೆ
ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ವಿ.ಸುನೀಲ್ಕುಮಾರ್ ಅವರ ಮುತುವರ್ಜಿಯಿಂದ ಬೆಳುವಾಯಿಯಿಂದ ಎಸ್.ಕೆ.ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆಗೊಳಿಸಲಾಗಿತ್ತು. ಉಳಿದೆಲ್ಲ ಕಡೆಯ ಕಾಮಗಾರಿ ಅತೀ ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗಿತ್ತಾದರೂ, ಸಾಣೂರು ಚಿಲಿಂಬಿ ಪರಿಸರದಲ್ಲಿ ಮಾತ್ರ ಮೇ ತಿಂಗಳ ಅಂತ್ಯದೊಳಗಾಗಿ ಸಂಪೂರ್ಣಗೊಳಿಸಲಾಗಿತ್ತು.
ಅಪಾಯಕಾರಿ ವಲಯ
ರಸ್ತೆ ಅಭಿವೃದ್ಧಿಗೂ ಮುನ್ನ ಸಾಣೂರು ಚಿಲಿಂಬಿ ನಡುವಿನ ರಸ್ತೆಯೂ ತೀರಾ ಅಪಾಯಕಾರಿ ವಲಯವೆಂದೇ ಕುಖ್ಯಾತಿ ಪಡೆದಿದೆ. ಇದಕ್ಕೆ ಕಾರಣವಾಗಿರುವುದು ತಿರುವು-ಮುರುವು, ಏರು ಹಾಗೂ ಇಳಿಜಾರಿನಿಂದ ಕೂಡಿದ ಪ್ರದೇಶದ ಒಂದು ಪಾರ್ಶ್ವದಲ್ಲಿ ಪ್ರಪಾತದ ಹೊಂಡವು ಒಳಗೊಂಡಿದೆ. ಗುಡ್ಡೆಯಲ್ಲಿ ಹುದುಗಿದ ಬಂಡೆ ತೆರವು, ಹೆಮ್ಮರಗಳು ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದು ನಿಂತಿರುವುದರಿಂದ ಅವುಗಳನ್ನು ಉಳಿಸಿ ಅದರಲ್ಲೂ ಅಗತ್ಯವೆನ್ನಿಸಿಸಿದ ಕೆಲವೊಂದು ಕಡೆಗಳಲ್ಲಿ ಇದ್ದ ಮರಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಚಾಲಕರ ಮನದಲ್ಲಿ ಇದ್ದ ಸಂತಸ ಮಳೆ ಆರಂಭವಾಗುತ್ತಿದ್ದಂತೆ ಅದು ಮಾಸಿ ಹೋಗಿದೆ. ಅದಕ್ಕೆ ಕಾರಣವಾಗಿರುವುದು ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿದೆ.
ಬೆಳುವಾಯಿ ಹಾಗೂ ಸಾಣೂರು ಕಡೆಗಳಿಂದ ವೇಗವಾಗಿ ಬರುವ ವಾಹನಗಳು ಚಿಲಿಂಬಿ ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿ ಗುಡ್ಡಕ್ಕೆ, ಮರಕ್ಕೆ ಅಥವಾ ಎದುರುಗಡೆಯಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.
ಕಾರಣವೇನು?
ನೂತನ ರಸ್ತೆಯಲ್ಲಿ ತೈಲಾಂಶ ಬಿದ್ದುಕೊಂಡಿರುವುದರಿಂದ ರಸ್ತೆಯ ಮೇಲ್ಭಾಗ ನೈಸಾಗಿರುವುದರಿಂದ ಬ್ರೇಕ್ ಹಾಕುವ ಸಂದರ್ಭದಲ್ಲಿ ಟಯರ್ ಜಾರಿಹೋಗುತ್ತಿರುವುದು ಒಂದು ಕಾರಣವಾಗಿದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಹಾಕಿರುವ ಮಣ್ಣಿನಲ್ಲಿ ಶೇಡಿ ಮಿಶ್ರಣಗೊಂಡಿರುವುದು ಕಾರಣವಾಗಿದೆ.
ಅಪಘಾತವನ್ನು ತಡೆಗಟ್ಟುವ ಸಲುವಾಗಿ ಸ್ವೀಡ್ಕಟ್ ಮಾಡುವ ಸಲುವಾಗಿ ರಸ್ತೆ ಬೇಲಿ ಅಳವಡಿಸುವುದು. ಅದು ಚಾಲಕರ ಗಮನಕ್ಕೆ ತರುವ ರೀತಿಯಲ್ಲಿ ಬೆಳಕು ಹೊಳೆಯುವ ಕೆಂಪು ಬಣ್ಣದ ಸ್ಟಿಕರ್ ಅಳವಡಿಸುವುದು, ವೇಗದ ಮಿತಿ ಫಲಕ ಅಳವಡಿಸಬೇಕು. ಪ್ರಪಾತ ಇರುವ ಒಂದು ಪಾರ್ಶ್ವದಲ್ಲಿ ತಡೆ ತಡೆಗೋಡೆ ನಿರ್ಮಸಬೇಕೆಂದು ಹೇಳುತ್ತಾರೆ ಬಸ್ ಚಾಲಕ ವಿಠಲ ಗೌಡ.