ಮಂಗಳೂರು, ಜು 06 (Daijiworld News/MSP): ಆರ್ಥಿಕ ಸಂಕಷ್ಟದಲ್ಲಿದ್ದ ಮಂಗಳೂರು ಮೂಲದ ಕ್ರೀಡಾಪಟು ದೀಪ್ತಿಕಾ ಪುತ್ರನ್ ಅವರ ಟ್ವೀಟ್ ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಕರಾತ್ಮಕವಾಗಿ ಸ್ಪಂದಿಸಿದ್ದು, " ನಿಮ್ಮನ್ನು ಸಂಪರ್ಕಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್ ) ಗೆ ನಿರ್ದೇಶನ ನೀಡಿದ್ದೇನೆ " ಎಂದು ಟ್ವೀಟ್ ಮೂಲಕ ಕ್ರೀಡಾಳು ದೀಪ್ತಿಕಾ ಪುತ್ರನ್ ಪ್ರತಿಕ್ರಿಯೆ ನೀಡಿದ್ದಾರೆ.
ಸರ್, ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಆದರೆ, ನನಗೆ ಆರ್ಥಿಕ ಸಹಾಯ ಹಸ್ತ ಬೇಕಿದೆ. ಹೀಗಾಗಿ ಕ್ರೀಡಾ ಸಾಧನೆಗಾಗಿ ದಯವಿಟ್ಟು ಸಹಾಯ ಮಾಡಿ " ಎಂದು ಸಚಿವ ಕಿರಣ್ ರಿಜಿಜು ಅವರಿಗೆ ಟ್ವೀಟ್ ಮೂಲಕ ದೀಪ್ತಿಕಾ ಪುತ್ರನ್ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಕಿರಣ್ ರಿಜಿಜು, " ಈಗಾಗಲೇ ನಿವೃತ್ತ ಜೀವನವನ್ನು ನಡೆಸುತ್ತಿರುವ ಮಾಜಿ ಕ್ರೀಡಾಪಟುಗಳಿಗೆ ಮಾತ್ರ ಹಣಕಾಸಿನ ನೆರವು ನೀಡುವ ಪಾಲಿಸಿಯನ್ನು ಕೈಗೊಳ್ಳಲಾಗಿದೆ . ಇದು ಅಂತರರಾಷ್ಟ್ರೀಯ ಪದಕ ವಿಜೇತರಿಗೆ ನಿಯಮಿತವಾಗಿ ನೀಡಲಾಗುವ ಪಿಂಚಣಿಯಾಗಿದೆ. ಹೀಗಾಗಿ ಮಾಹಿತಿಗಾಗಿ ನಿಮ್ಮನ್ನು ಸಂಪರ್ಕಿಸಲು ನಾನು ಈಗಾಗಲೇ @Media_SAI ( ಭಾರತೀಯ ಕ್ರೀಡಾ ಪ್ರಾಧಿಕಾರ ) ತಂಡಕ್ಕೆ ಸೂಚನೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಂಗಳೂರು ಮೂಲದವರಾಗಿರುವ ದೀಪ್ತಿಕಾ ಪುತ್ರನ್ ರಾಷ್ಟೀಯ ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ವಿಜೇತೆ ಆಗಿದ್ದು ಕರ್ನಾಟಕ ಕಿರಿಯ ಕ್ರೀಡಾಪಟುವಾಗಿದ್ದಾರೆ. ಸಪ್ಟೆಂಬರ್ 19ರಂದು ಕೆನಡಾದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ದೀಪ್ತಿಕಾ ಪುತ್ರನ್ ಭಾರತವನ್ನ ಪ್ರತಿನಿಧಿಸುತ್ತಿದ್ದಾರೆ.