ಉಡುಪಿ, ಸೆ13: ಶ್ರೀಕೃಷ್ಣನ ನೆಲೆವೀಡು ಉಡುಪಿಯಲ್ಲಿ ಇಂದು ಮತ್ತು ನಾಳೆ ಜನ್ಮಾ಼ಷ್ಟಮಿಯ ಸಂಭ್ರಮ.ಈ ಹಿನ್ನೆಲೆಯಲ್ಲಿ ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.ಇಡೀ ಕೃಷ್ಣ ನಗರಿಯೇ ಸಡಗರದಲ್ಲಿ ಮುಳುಗಿದೆ. ಶ್ರೀ ಕೃಷ್ಣ ಮಠ, ರಥಬೀದಿಯಲ್ಲೆಲ್ಲಾ ಹಬ್ಬದ ಕಳೆ ಕಟ್ಟಿದೆ. ಶ್ರೀಕೃಷ್ಣ ಸರ್ವಾಲಂಕೃತಗೊಂಡು ಕಂಗೊಳಿಸುತ್ತಿದ್ರೆ, ಇತ್ತ ಗೋಪಿಲೋಲನನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಮಠದತ್ತ ಹರಿದುಬರುತ್ತಿದೆ. ಶ್ರೀ ಕೃಷ್ಣ ಲೀಲೋತ್ಸವ ಮತ್ತು ವಿಠಲ್ ಪಿಂಡಿ ಜನ್ಮಾಷ್ಠಮಿ ಉತ್ಸವದ ಮುಂದಿನ ದಿನದಂದು ನಡೆಯುವ ಎರಡು ದೊಡ್ಡ ಉತ್ಸವಗಳು.
ಜನ್ಮಾಷ್ಟಮಿಯಲ್ಲಿ ಹೆಚ್ಚಿನ ಭಕ್ತರು ಉಪವಾಸ ಕೈಗೊಂಡು ಆ ಬಳಿಕ ಆರ್ಘ್ಯ ಪ್ರಧಾನದ ಧಾರ್ಮಿಕ ಕ್ರಿಯೆಯನ್ನು ಮುಗಿಸುತ್ತಾರೆ. ಏಕಾದಶಿ ಸಮಯದಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಜನ್ಮಾಷ್ಟಮಿ ಉಪವಾಸದ ಸಮಯದಲ್ಲಿ ಅನುಸರಿಸುತ್ತಾರೆ.
ವಿಟ್ಲ ಪಿಂಡಿಯಂದು ಗೊಲ್ಲರು ರಥಬೀದಿಯಲ್ಲಿ ನೇತು ಹಾಕಿರುವ ಮೊಸರುಕುಡಿಕೆಗಳನ್ನು ಒಡೆಯುವ ಮೂಲಕ ಕೃಷ್ಣ ಹುಟ್ಟಿದ ದಿನವನ್ನು ಸಂಭ್ರಮಿಸಲಿದ್ದು ಅದಕ್ಕಾಗಿಯೇ ರಥಬೀದಿಗಳಲ್ಲಿ ಕಂಬಗಳನ್ನು ನೆಟ್ಟು ಅಲಂಕಾರ ಮಾಡಲಾಗುತ್ತಿದೆ. ಹುಲಿ ಕುಣಿತವೂ ಇಲ್ಲಿ ಪ್ರಮುಖವಾಗಿದ್ದು ಇದರೊಂದಿಗೆ ವಿವಿಧ ಸ್ಪರ್ಧೆಗಳೂ ನಡೆಯಲಿವೆ.