ಮೂಲ್ಕಿ, ಜು06(Daijiworld News/SS): ಶ್ರೀಕ್ಷೇತ್ರ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಸುಮಾರು 12 ಕೆಜಿ ಬಂಗಾರ ಬಳಸಿ ನಿರ್ಮಿಸಲಿರುವ ಸ್ವರ್ಣ ಪಲ್ಲಕ್ಕಿಯ ಕಾಮಗಾರಿಗೆ ಜು. 7ರಂದು ಚಾಲನೆ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀದುರ್ಗಾಪರಮೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸುನಿಲ್ ಆಳ್ವ ಈ ಬಗ್ಗೆ ಮಾಹಿತಿ ನೀಡಿ, ಜು. 7ರಂದು ಬೆಳಗ್ಗೆ 11.30 ರಿಂದ ಉಡುಪಿಯ ಸ್ವರ್ಣ ಜುವೆಲ್ಲರ್ಸ್ ನಿರ್ಮಿಸಲಿರುವ ಸ್ವರ್ಣ ಪಲ್ಲಕ್ಕಿಯ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್ ಮತ್ತು ಕೆ.ಅಮರನಾಥ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುರತ್ಕಲ್ ಎಂಆರ್ಪಿಎಲ್ ಸಂಸ್ಥೆಯು ದೇವಳಕ್ಕೆ ಅತೀ ಅವಶ್ಯಕವಾಗಿರುವ ಕಲುಷಿತ ನೀರಿನ ಶುದ್ಧೀಕರಣ ಘಟಕ(ಎಸ್ಟಿಪಿ) ದ ನಿರ್ಮಾಣಕ್ಕಾಗಿ 42.05 ಲಕ್ಷ ರೂ.ಕೊಡುಗೆ ನೀಡಿದ್ದು, ಎಸ್ಟಿಪಿ ಘಟಕದ ಕಾಮಗಾರಿಗೆ ಎಂಆರ್ಪಿಲ್ ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಬಿ.ಎಚ್.ವಿ.ಪ್ರಸಾದ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸುನಿಲ್ ಆಳ್ವ ಹೇಳಿದ್ದಾರೆ.