ಮಂಗಳೂರು, ಜು 05 (Daijiworld News/SM): ಮನೆ ಕಾವಲುಗಾರನಂತಿರೋ ಶ್ವಾನಗಳು ಬೊಗಳುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿಯ ಪ್ರಕಾರ ನಾಯಿ ಬೊಗಳುವುದೇ ತಪ್ಪು ಎಂಬಂತಾಗಿದೆ. ನೆರೆ ಮನೆಯವರು ಸಾಕಿ ಸಲಹಿದ ನಿಯತ್ತಿನ ಪ್ರಾಣಿ ಬೊಗಳಿದ್ದಕ್ಕೆ ಸುರತ್ಕಲ್ ನಿವಾಸಿಯೊಬ್ಬರು ಕೇಸು ದಾಖಲಿಸಿರುವ ವಿಚಿತ್ರವಾದ ಘಟನೆಯೊಂದು ವರದಿಯಾಗಿದೆ.
ಇದು ಕೇಳೋಕೆ ಹಾಸ್ಯಸ್ಪದವಾಗಿದ್ದರೂ, ನೀವು ನಂಬಲೇ ಬೇಕಾದ ನೈಜ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಕಾಣಕಟ್ಲ ಎಂಬಲ್ಲಿನ ನಿವಾಸಿಯೊಬ್ಬರು ಪ್ರೀತಿಯಿಂದ ಸಾಕಿದ ಶ್ವಾನ ಪ್ರತಿನಿತ್ಯ ಬೊಗಳುತ್ತಿತ್ತು. ಅರೆ, ಶ್ವಾನ ಅಂದ್ರೆ ಬೊಗಳುವುದರಲ್ಲಿ ತಪ್ಪೇನಿದೆ. ಆದರೆ, ಇಲ್ಲಿ ಶ್ವಾನ ಬೊಗಳಿದ್ದೇ ತಪ್ಪಾಗಿದೆ. ನೆರೆ ಮನೆಯವರಿಗೆ ಶ್ವಾನ ಗೊಗಳಿರುವುದು ಕಿರಿಕಿರಿಯೆನಿಸಿದೆ. ಅವರ ಮಕ್ಕಳ ಓದಿಗೆ ನಾಯಿ ಬೊಗಳುವುದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ಅವರು, ನೇರಾನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಗೂ ಶ್ವಾನದ ಮಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
ಇನ್ನು ಬಡವರೇ ಆಗಿರಲಿ, ಶ್ರೀಮಂತರೇ ಆಗಿರಲಿ ಮನೆಯಲ್ಲಿ ನಾಯಿಯನ್ನು ಸಾಕುವವರು ಅನೇಕ ಮಂದಿ ಇದ್ದಾರೆ. ಎಷ್ಟೇ ಬಡತನವಿದ್ದರೂ ಶ್ವಾನಪ್ರೇಮ ಮಾತ್ರ ಕಡಿಮೆಯಾಗದು. ನಾಯಿ ಬೊಗಳಿದರೆ ಅದೇ ಒಂದು ಖುಷಿ ಎಂದು ಅದೆಷ್ಟೋ ಜನ ಹೇಳುತ್ತಾರೆ.
ಶ್ವಾನ ಬೊಗಳಿದ ಪರಿಣಾಮ ಮಕ್ಕಳ ಓದಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಲಾಗಿದ್ದು, ಇದು ನಾಯಿಯ ನಿಯತ್ತಿನ ಪ್ರಶ್ನೆಯೋ ಅಥವಾ ನೆರೆಮನೆಯವರ ಮೇಲಿನ ಕೋಪವೋ ತಿಳಿಯುತ್ತಿಲ್ಲ. ಆದ್ರೆ ನಾಯಿ ಬೊಗಳಿದ್ದಕ್ಕೆ ಕೇಸು ದಾಖಲಾಗಿರುವುದು ಮಾತ್ರ ಸತ್ಯ.