ಮಂಗಳೂರು, ಜು05(Daijiworld News/SS): ಪ್ರಧಾನಿ ಮೋದಿ ಅವರ ನವ ಭಾರತ ನಿರ್ಮಾಣದ ಆಶಯಕ್ಕೆ ಪೂರಕವಾದ ಐತಿಹಾಸಿಕ ಬಜೆಟ್ ಇದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿಯ ಸೂಟ್ಕೇಸ್ ಬದಿಗಿರಿಸಿ ಭಾರತೀಯ ಸಂಸ್ಕೃತಿಯಂತೆ ಕೆಂಪು ವಸ್ತ್ರದಲ್ಲಿ ಬಜೆಟ್ ಪ್ರತಿಗಳ ಕಟ್ಟನ್ನು ತರುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರಕಾರ ನಮ್ಮ ಪರಂಪರೆಯನ್ನು ಉಳಿಸುವತ್ತ ಹೆಜ್ಜೆಯಿರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 30 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಪರಿಸರ ಸ್ನೇಹಿ ಯೋಜನೆಯಾಗಿದೆ. ರೈಲ್ವೆ ನಿಲ್ದಾಣಗಳ ಆಧುನೀಕರಣ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಗೆ ಏರಿಸಲು ನಿರ್ಧಾರ, ವಿದ್ಯುತ್ ಕೊರತೆ ನಿವಾರಿಸಲು ಒನ್ ನೇಶನ್ ಒನ್ ಗ್ರಿಡ್ ಮುಂತಾದ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಪ್ರಗತಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜಿಎಸ್ಟಿಯಲ್ಲಿ ನೋಂದಾಯಿಸಿರುವ ಸಣ್ಣ ಉದ್ದಿಮೆದಾರರಿಗೆ ಶೇ. 2 ಬಡ್ಡಿ ದರದಲ್ಲಿ ಸಾಲ ಒದಗಿಸಲು 350 ಕೋಟಿ ರೂ. ಮೀಸಲು, ವಾರ್ಷಿಕ ವಹಿವಾಟು 1.5 ಕೋಟಿ ರೂ. ಕಡಿಮೆ ಇರುವ 3 ಕೋಟಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಕರಮ್ಯೋಗಿ ಮಾನ್ಧನ್ ಯೋಜನೆಯಲ್ಲಿ ಪಿಂಚಣಿ ಸೌಲಭ್ಯ ಘೋಷಿಸುವ ಮೂಲಕ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಹೇಳಿದರು.
ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ, ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಘೋಷಿಸುವ ಮೂಲಕ ಮಹಿಳೆಯರ ಹಿತ ರಕ್ಷಣೆಗೆ ಬಜೆಟ್ನಲ್ಲಿ ಆದ್ಯತೆ ಕಲ್ಪಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ