ಕುಂದಾಪುರ, ಜೂ 05 (Daijiworld News/MSP): ಸಮುದ್ರದ ತೆರೆಗಳ ಜೊತೆಗೆ ಕಡಲತೀರಕ್ಕೆ ಬಂದಿದ್ದ ಎರಡು ಕಡಲಾಮೆಗಳು ಕಡಲ ತೀರದಲ್ಲಿ ಎಸೆಯಲ್ಪಟಿದ್ದ ಬಲೆಯೊಳಗೆ ಬಂಧಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ಕೋಟ ಮಣೂರಿನ ಪಡುಕೆರೆ ಶಾಲೆ ಸಮೀಪ ಬೆಳಕಿಗೆ ಬಂದಿದೆ. ಬಲೆಯೊಳಗೆ ಬಂಧಿಯಾಗಿದ್ದ ಎರಡು ಕಡಲಾಮೆಗಳು ಹೊರಬರಲು ವಿಫಲ ಪ್ರಯತ್ನ ನಡೆಸುತ್ತಿದ್ದ ಸಂದರ್ಭ ಕೋಟದ ನಾಲ್ವರು ಯುವಕರು ರಕ್ಷಣೆ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಡಲ ತೀರದಲ್ಲಿ ಮಾತನಾಡುತ್ತಾ ನಡೆದು ಹೋಗುತ್ತಿದ್ದ ಸುಧಾಕರ ಬಂಗೇರ, ಅಭಿಷೇಕ್ ಬಂಗೇರ, ಆದರ್ಶ ಹಾಗೂ ಆನಂದ ಹಾಲಾಡಿ ಎಂಬುವರು ಸಮುದ್ರದ ತೀರದಲ್ಲಿ ಬಿದ್ದಿದ್ದ ಬಲೆಯ ರಾಶಿಯಲ್ಲಿ ಚಲನೆಯನ್ನು ಗಮನಿಸಿದ್ದಾರೆ. ಸಮೀಪ ಹೋಗಿ ನೋಡಿದಾಗ ಬಲೆಯೊಳಗೆ ಎರಡು ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಲೆಯನ್ನು ಬಿಡಿಸಿ ಕಡಲಾಮೆಗಳನ್ನು ರಕ್ಷಿಸಿ ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬುಧವಾರ ಬೀಜಾಡಿಯಲ್ಲಿಯೂ ಒಂದು ಕಡಲಾಮೆಯನ್ನು ಸ್ಥಳೀಯ ಯುವಕರು ರಕ್ಷಿಸಿದ್ದರು.