ಮೂಡುಬಿದಿರೆ, ಜೂ 05 (Daijiworld News/MSP): ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡಕ್ಕೆ ದಾಳಿ ನಡೆಸಿದ ರೌಡಿ ನಿಗ್ರಹ ದಳವು ನಾಲ್ಕು ಟ್ರಿಲ್ಲರ್ ಮೆಷಿನ್, ನಾಲ್ಕು ಲೋಡೆಡ್ ಲಾರಿಗಳು ಸೇರಿದಂತೆ ಸುಮಾರು 31 ಲಕ್ಷದ ಸೊತ್ತುಗಳು ವಶಕ್ಕೆ ಪಡೆದುಕೊಂಡ ಘಟನೆ ಮೂಡುಬಿದಿರೆಯ ಬಡಗಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಗ್ರಾಮದಲ್ಲಿ ನಡೆದಿದೆ.
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪಣಂಬೂರು ಉತ್ತರ ಉಪವಿಭಾಗದ ಎಸಿಪಿ ಶ್ರೀ ಶ್ರೀನಿವಾಸ ಆರ್.ಗೌಡ ಅವರ ನೇತೃತ್ವದ ರೌಡಿ ನಿಗ್ರಹ ದಳವು ದಾಳಿ ನಡೆಸಿದ್ದಾರೆ. ಈ ಸಂದರ್ಭ ಕೆಂಪು ಕಲ್ಲುಗಳನ್ನು ಕೊರೆಯುವ 4 ಟ್ರಿಲ್ಲರ್ ಡ್ರೆಸ್ಸಿಂಗ್ ಮಷೀನ್ ಗಳನ್ನು ಮತ್ತು ಮೂಡಬಿದ್ರೆ ತಾಲೂಕು ಬಡಗಮಿಜಾರು ಗ್ರಾಮದ ಬಂಗೇರಪದವು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಕೆಎ-19-ಸಿ-2031, ಕೆಎ- 19-ಬಿ-7199, ಕೆಎ-42-1271, ಕೆಎ-19-ಎಎ-8904 ನೇ ಲಾರಿ ಮತ್ತು ಲಾರಿಗಳಲ್ಲಿ ತುಂಬಿದ ಕೆಂಪು ಕಲ್ಲುಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇವರಿಗೆ ಹಸ್ತಾಂತರಿಸಲಾಗಿದೆ.