ಉಡುಪಿ, ಜೂ 05 (Daijiworld News/MSP): ವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಲ್ಲವೆಂಬ ನನ್ನ ಹರಿಹರದ ಹೇಳಿಕೆ ಬಗ್ಗೆ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಲಿಂಗಾಯತ ಧರ್ಮದ ಮಾತಾಡಲಿಕ್ಕೆ ನನಗೇನು ಅಧಿಕಾರವೆಂಬ ಆಕ್ಷೇಪಣೆಗೆ ನಾನು ಈಗಾಗಲೇ ಅನೇಕ ಬಾರಿ ಉತ್ತರಿಸಿದ್ದೇನೆ. ಆದರೆ ವೀರಶೈವ ಲಿಂಗಾಯತ ಹಿಂದೂ ಧರ್ಮದ ಭಾಗವಷ್ಟೇ ಈ ವಿಷಯದಲ್ಲಿ ನಾನು ಸ್ನೇಹ ಸೌಹಾರ್ದದ ಸಂವಾದಕ್ಕೆ ಸಿದ್ಧನಿದ್ದೇನೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀಗಳು, " ಸಹೋದರರ ಪೈಕಿ ತಾನು ಉಳಿದವರನ್ನು ತೊರೆದು ಬೇರೆ ಮನೆ ಮಾಡುತ್ತೇನೆಂದು ಹೇಳಿದರೆ ಉಳಿದವರು ನಮ್ಮನ್ನು ಬಿಟ್ಟು ಬೇರೆಯಾಗುವುದು ಬೇಡವೆಂದು ಕೇಳಿಕೊಂಡರೆ ಅದು ತಪ್ಪಾಗುವುದೇ? ಹಿಂದೂ ಧರ್ಮವು ದುರ್ಬಲವಾಗಬಾರದು, ನಾವೆಲ್ಲಾ ಒಟ್ಟಾಗಿರಬೇಕೆಂಬ ಒಂದೇ ಸದುದ್ದೇಶದಿಂದ ಸ್ನೇಹ ಸೌಹಾರ್ದಭಾವದಿಂದ ಈ ಹೇಳಿಕೆಯನ್ನು ನೀಡಿದ್ದೇನೆ. ಇದನ್ನು ತಪ್ಪಾಗಿ ಪರಿಗಣಿಸಬಾರದು" ಎಂದಿದ್ದಾರೆ
"ವೈಷ್ಣವ ಮತ್ತು ಲಿಂಗಾಯತಗಳು ಹಿಂದೂ ಧರ್ಮದ ಅಂಗವಾಗಿದ್ದರೆ ನೀವು ಲಿಂಗಾಯತ ಸಂಪ್ರದಾಯವನ್ನು ಆಚರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದ್ವೈತ ,ದ್ವೈತ ಎಂದು ಹಿಂದೂ ಧರ್ಮದ ಅಂಗವಾಗಿದ್ದರೂ ಅದ್ವೈತಿಗಳು ದ್ವೈತ ಸಂಪ್ರದಾಯವನ್ನು ಆಚರಿಸಬೇಕಾಗಿಲ್ಲ. ತಮ್ಮ ತಮ್ಮ ಸಂಪ್ರದಾಯವನ್ನು ಆಚರಿಸಿಕೊಂಡು ಸ್ನೇಹ ಸೌಹಾರ್ದದಿಂದ ಸಹೋದರ ಭಾಗದಿಂದ ಸಮಾನ ಅಂಶಗಳು ಸಹಕರಿಸಿಕೊಂಡು ಹೋಗಬೇಕು. ವೀರಶೈವ - ಲಿಂಗಾಯತರು ಒಟ್ಟಾಗಿದ್ದರೆ ಲಿಂಗಾಯತ ಧರ್ಮವು ಬಲಿಷ್ಠವಾಗುತ್ತದೆ. 1956 ರಲ್ಲಿ ಎಲ್ಲಾ ವೀರಶೈವ ಲಿಂಗಾಯತ ಮಠಾಧೀಶರ ಜೊತೆಗೆ ಉತ್ತಮ ಸಂಪರ್ಕವನ್ನು ಬೆಳೆಸಿಕೊಂಡದ್ದರಿಂದ ಕೇವಲ ಆತ್ಮೀಯತೆಯಿಂದ ನಾನು ಹೇಳಿಕೆ ನೀಡಿದ್ದೇನೆ"
" ಲಿಂಗಪೂಜೆ ಮತ್ತು ಶಿವಾರಾಧನೆಯನ್ನು ಒಪ್ಪಿದ ಮೇಲೆ ಲಿಂಗಾಯತ ಧರ್ಮವೂ ಹಿಂದೂ ಧರ್ಮದಿಂದ ಬೇರೆಯಾಗುವುದು ಹೇಗೆ? ಶಿವನ ಸ್ವರೂಪದ ಬಗ್ಗೆ ಶೈವರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಪರಬ್ರಹ್ಮನನ್ನ ದ್ವೈತಿಗಳು, ವಿಶಿಷ್ಟಾದ್ವೈ ತಿಗಳು ಸಗುಣ, ಸಾಕಾರ ಹಾಗೂ ಲಕ್ಷ್ಮೀ ಪತಿ ಎಂದು ಹೇಳುತ್ತಾರೆ. ಅದ್ವೈತಿಗಳು , ನಿರ್ಗುಣ, ನಿರಾಕಾರ ಎಂದು ಹೇಳುತ್ತಾರೆ. ಆದರೂ ತ್ರಿಮತಸ್ಥರೂ ವೈದಿಕರು ಹಿಂದೂಗಳು ಆಗಿಲ್ಲವೇ ? ಅದರಂತೆ ಶಿವನ ಸ್ವರೂಪದಲ್ಲಿ ವಿವಾದವಿದ್ದರೂ ಎಲ್ಲ ಶೈ ವರೂ ಹಿಂದೂಗಳೇ ಆಗಿದ್ದಾರೆ.
ರಾಮಕೃಷ್ಣಾಶ್ರಮ, ಆರ್ಯ ಸಮಾಜ, ಸ್ವಾಮಿನಾರಾಯಣ ಪಂಥ ಮುಂತಾದ ಅನೇಕ ಧರ್ಮಗಳು ಜಾತಿ ವ್ಯವಸ್ಥೆಯನ್ನು ಒಪ್ಪದಿದ್ದರೂ ಅವರೆಲ್ಲರೂ ಹಿಂದೂಗಳೇ ಆಗಿಲ್ಲವೇ ? ರಾಮಕೃಷ್ಣಾಶ್ರಮವು ಕೆಲವು ಸವಲತ್ತುಗಳಿಗಾಗಿ ಪ್ರತ್ಯೇಕ ಧರ್ಮ ಎಂದು ಉಚ್ಚನ್ಯಾಯಾಲಯದಲ್ಲಿ ವಾದಿಸಿದರೂ ಅದನ್ನು ಒಪ್ಪದೆ ಹಿಂದೂ ಧರ್ಮದ ಅಂಗವೆಂದೆ ತೀರ್ಪು ನೀಡಿಲ್ಲವೇ ?
ಈ ವಿಷಯದಲ್ಲಿ ನಾನು ಸ್ನೇಹ ಸೌಹಾರ್ದದ ಸಂವಾದಕ್ಕೆ ಸಿದ್ಧನಿದ್ದೇನೆ. ನಮ್ಮ ಆತ್ಮೀಯರೂ ಸಹೃದಯರೂ , ಹೋರಾಟಗಾರರಾದ ಸಚಿವ ಪಾಟೀಲರು, ವಿನಯ ಕುಲಕರ್ಣಿ, ಜಾಮದಾರ್ ಮುಂತಾದವರ ಹೇಳಿಕೆಯನ್ನು ನೋಡಿದ್ದೇನೆ. ಇವರೆಲ್ಲರ ಜೊತೆಗೆ ಸ್ನೇಹ ಸಂವಾದಕ್ಕೆ ನಾನು ಸಿದ್ದನಿದ್ದೇನೆ. ಸಂವಾದವು ಏಕಾಂತದಲ್ಲಿ ಶಾಂತ ವಾತಾವರಣದಲ್ಲಿ ಸೌಹಾರ್ದದಿಂದ ನಡೆಯಬೇಕು. ಬೆಂಗಳೂರಿನ ನಮ್ಮ ಆಶ್ರಮ ಅಥವಾ ಬೇರೆ ಜಾಗದಲ್ಲಾಗಲಿ ಜು.28 ರ ಒಳಗೆ ಇಬ್ಬರಿಗೂ ಅನುಕೂಲವಾದ ಸ್ಥಳ, ದಿನದಲ್ಲಿ ಈ ಸಂವಾದವನ್ನು ಮಾಡಬಹುದು. ಜುಲೈ 28ರ ನಂತರವಾದರೆ ನಾವು ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿರುವುದರಿಂದ ಅಲ್ಲಿಯೇ ಏರ್ಪಾಡು ಮಾಡಬಹುದು ಎಂದು ತಿಳಿಸಿದ್ದಾರೆ.