ಮಂಗಳೂರು, ಜೂ 05 (Daijiworld News/MSP): ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಪಾಗಲ್ ಪ್ರೇಮಿಯಿಂದ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗಳಾಗಿದ್ದ ವಿದ್ಯಾರ್ಥಿನಿ ದೀಕ್ಷಾ, ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬರುತ್ತಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹದಿನೈದು ಎಂ.ಎಲ್ ನಷ್ಟು ನೀರು ಕುಡಿಸಲಾಗಿದೆ. ಐದು ದಿನಗಳ ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಚೇತರಿಸಿಕೊಂಡಿರುವ ಕಾರಣದಿಂದ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗುರುವಾರ ದಾದಿಯರ ಮಾತಿಗೆ ಸ್ಪಂದಿಸಿ ಮಾತನಾಡುವ ಪ್ರಯತ್ನ ಮಾಡಿದ್ದಾಳೆ. ಇದರಿಂದ ಕುಟುಂಬಸ್ಥರಲ್ಲಿ ಆಶಾಭಾವನೆ ಮೂಡಿಸಿದೆ. ಆಕೆಗೆ ಎಡಗೈ ಪ್ಲಾಸ್ಟಿಕ್ ಸರ್ಜರಿ ಬಾಕಿಯುಳಿದಿದೆ ಎಂದು ತಿಳಿದುಬಂದಿದೆ.
"ಚೂರಿ ಇರಿದ ದಿನ ತಾನು ಯಾವುದೇ ಮಾದಕ ದ್ರವ್ಯ ಸೇವಿಸಿರಲಿಲ್ಲ. ಆಕೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೆ ದೂರ ಮಾಡಿರುವುದರಿಂದ ಮಾನಸಿಕವಾಗಿ ನೊಂದು" ಕೃತ್ಯ ಎಸಗಿರುವುದಾಗಿ ಆರೋಪಿ ಸುಶಾಂತ್ ಪೊಲೀಸರಿಗೆ ತಿಳಿಸಿದ್ದಾನೆ.