ಮಂಗಳೂರು, ಜು05(Daijiworld News/SS): ಕೇಂದ್ರ ಬಜೆಟ್ನಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ, ವೈದ್ಯಕೀಯ ಸೇವೆ, ಗೋ ಹತ್ಯೆ ನಿಷೇಧಕ್ಕೆ ಕಠಿಣ ಕ್ರಮ ಮೊದಲಾದುವುಗಳನ್ನು ನಿರೀಕ್ಷಿಸುತ್ತೇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ರಾಜ್ಯಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದ ತಕ್ಷಣ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ದಲಿತ ಬಂಧುಗಳ ಮನೆಗೆ ಭೇಟಿ ನೀಡುವ ನನ್ನ ಕಾರ್ಯಕ್ರಮ ಯಥಾಪ್ರಕಾರ ಮುಂದುವರಿಯಲಿದೆ. ವಯಸ್ಸಾದ ಕಾರಣ ಹಿಂದಿನಂತೆ ಚಟುವಟಿಕೆಯಿಂದ ನಡೆದಾಡಲು ಕಷ್ಟವಾಗುತ್ತಿದೆ. ಈ ಹಿಂದೆ ದಲಿತ ಬಂಧುಗಳ ಮನೆಗೆ ಭೇಟಿ ನೀಡಿದ ಬಳಿಕ ಸಮಾಜದಲ್ಲಿ ಅಸ್ಪಶ್ಯತೆ ನಿವಾರಣೆಯಾಗಿದೆ ಎಂದು ಹೇಳಿದರು.
ಮಾತ್ರವಲ್ಲ, ದಲಿತ ಬಂಧುಗಳ ಮನೆಗೆ ಭೇಟಿ ನೀಡಿದ ಬಳಿಕ ಮೇಲುಕೀಳು ಎಂಬ ಭೇದಭಾವ ಇಲ್ಲದಾಗಿದೆ. ಸಮಾಜದಲ್ಲಿ ಪರಿವರ್ತನೆ ತರುವುದು ಉದ್ದೇಶ. ಇದನ್ನು ಎಲ್ಲ ಸ್ವಾಮೀಜಿಗಳು ಒಪ್ಪಿಕೊಂಡು ದಲಿತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರಿನ ಮಾರತ್ಹಳ್ಳಿಯಲ್ಲಿ ಎರಡು ಎಕರೆ ಜಾಗದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಪೇಜಾವರ ಮಠದಿಂದ ಸುಸಜ್ಜಿತ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 15 ಕೋಟಿ ರೂ. ವೆಚ್ಚವಾಗಿದ್ದು, ಇನ್ನೂ 10 ಕೋಟಿ ರೂ. ಅವಶ್ಯಕತೆ ಇದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಇದೇ ವೇಳೆ ಶಿಷ್ಯೆ ಉಮಾಭಾರತಿ ಚುನಾವಣಾ ಕಣದಿಂದ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಅವರು ಹಿಂದಿನಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೇಜಾವರ ಮಠದ ಸೇವಾ ಕಾರ್ಯಗಳಲ್ಲೂ ಸಕ್ರಿಯವಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.