ಮಂಗಳೂರು, ಜು05(Daijiworld News/SS): ಹೊಸ ಜವಾಬ್ದಾರಿ ನಿರ್ವಹಿಸಲು ಕಾಲಕ್ಕೆ ತಕ್ಕಂತೆ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ವರ್ಷ ಮುಂಬಡ್ತಿ ಪಡೆದ ಪೊಲೀಸರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೃತ್ತಿ ಜೀವನದಲ್ಲಿ ಪದೋನ್ನತಿ ಬಹಳಷ್ಟು ಖುಷಿಯ ಸಂಗತಿ. ಪದೋನ್ನತಿ ಪಡೆಯುವ ಮೂಲಕ ಜವಾಬ್ದಾರಿಯೂ ಹೆಚ್ಚುತ್ತದೆ. ಹೊಸ ಜವಾಬ್ದಾರಿ ನಿರ್ವಹಿಸಲು ಕಾಲಕ್ಕೆ ತಕ್ಕಂತೆ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಕ್ಸಲಿಸಂ, ಟೆರರಿಸಂ, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಈ ಸವಾಲನ್ನು ಎದುರಿಸಲು ಪೊಲೀಸರು ಕಂಪ್ಯೂಟರ್, ಇಂಟರ್ನೆಟ್ ಮತ್ತಿತರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಪ್ರತಿಭೆ ಮತ್ತು ಪಾಂಡಿತ್ಯ ಹೊಂದುವುದು ಅವಶ್ಯ ಎಂದು ಸಲಹೆ ನೀಡಿದರು.
ಮುಂದೆ ಸೈಬರ್ ಅಪರಾಧಗಳೇ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಈ ಸವಾಲು ಎದುರಿಸುವ ಈ ನಿಟ್ಟಿನಲ್ಲಿ ಪೊಲೀಸ್ ಕೇಂದ್ರ ಕಚೇರಿ ವತಿಯಿಂದ ನೀಡಲಾಗುವ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ವರ್ಷ ಮುಂಬಡ್ತಿ ಪಡೆದ 143 ಪೊಲೀಸರಿಗೆ ಆಯುಕ್ತರು ಶುಭಾಶಯ ಕೋರಿದರು.