ಉಡುಪಿ, ಜು05(Daijiworld News/SS): ಗೋವು ಕೇವಲ ಧಾರ್ಮಿಕ ನಂಬಿಕೆಯಲ್ಲ, ಕೃಷಿಯ ಆಧಾರಸ್ತಂಭ ಎಂದು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಈ ಹಿಂದಿನ ಎನ್ಡಿಎ ಸರಕಾರ ಜಾರಿಗೆ ತಂದಿದ್ದ ಪ್ರಾಣಿ ಕ್ರೌರ್ಯ ತಡೆ ಮಂಡಳಿ ಮರು ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಗೋಶಾಲೆ ಸ್ಥಾಪಿಸಿ 12 ಜನರ ಸಮಿತಿ ಮೂಲಕ ಅಕ್ರಮ ತಡೆಯಬೇಕು. ಗೋವು ಕೇವಲ ಧಾರ್ಮಿಕ ನಂಬಿಕೆಯಲ್ಲ, ಕೃಷಿಯ ಆಧಾರಸ್ತಂಭ. ಆರ್ಥಿಕ ಸುಧಾರಣೆಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಶರೀಯತ್ ಕಾನೂನಿನಲ್ಲಿ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆಯಿದ್ದು, ಗೋ ಕಳ್ಳರ ವಿರುದ್ಧ ಫತ್ವಾ ಜಾರಿ ಮಾಡಿ ಎಂದು ಒತ್ತಾಯಿಸಿಸದ ಅವರು, ಬಕ್ರೀದ್ ಹಬ್ಬ ಆಚರಿಸಿ. ಆದರೆ ಗೋ ಹತ್ಯೆ ಮಾಡಿದರೆ ಸುಮ್ಮನಿರೆವು. ಹಬ್ಬ ಬೇಕಾ, ಅಶಾಂತಿ ಬೇಕಾ..? ಎಂದು ಪ್ರಶ್ನಿಸಿದರು.
ಮಂಗಳೂರಿನ ಕುದ್ರೋಳಿಯ ಅಧಿಕೃತ ಕಸಾಯಿಖಾನೆಯಲ್ಲಿ ನಿತ್ಯ 10, 12 ಜಾನುವಾರುಗಳ ವಧೆಗಷ್ಟೇ ಅವಕಾಶವಿದೆ. ಆದರೆ 2,000ಕ್ಕೂ ಅಧಿಕ ಬೀಫ್ ಸ್ಟಾಲ್ಗಳಿಗೆ ಅಕ್ರಮವಾಗಿ ಗೋಮಾಂಸ ಪೂರೈಕೆಯಾಗುತ್ತಿದೆ. ರಾಜ್ಯ ಸರಕಾರ ಗೋವಿನ ಪರ ಕಾನೂನು ಬದಿಗಿಟ್ಟು ಗೋಹಂತಕರಿಗೆ, ಗೋ ಕಳ್ಳರಿಗೆ ಬೆಂಬಲ ನೀಡುತ್ತಿದೆ. ಹಿಂದೂ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ಸಲ್ಲದು ಎಂದು ನುಡಿದರು.
ಗೋವಿಗಾಗಿ ನಾವು ರಕ್ತ ಚೆಲ್ಲಲೂ ಸಿದ್ಧರಿದ್ದು, ಒಂದು ತಿಂಗಳೊಳಗೆ ಅಕ್ರಮಗಳಿಗೆ ತಡೆ ಹಾಕುವಂತೆ ಜಿಲ್ಲಾಡಳಿತಕ್ಕೆ ಗಡುವು ನೀಡಿದರು. ಮಾತ್ರವಲ್ಲ, ತಪ್ಪಿದರೆ ಗೋ ರಕ್ಷಕರ ತಂಡದ ಮೂಲಕ ಆಯಾ ಠಾಣೆ ಎದುರು ನಿತ್ಯ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.