ಮಂಗಳೂರು, ಜು 04 (Daijiworld News/SM): ಕಾರ್ಕಳದ ಮಾಜಿ ಶಾಸಕರು ಗೋಪಾಲ್ ಭಂಡಾರಿ(66) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನಿಂದ ಜುಲೈ 4ರಂದು ಮಂಗಳೂರಿಗೆ ಆಗಮಿಸುತ್ತಿದ್ದರು. ಮಧ್ಯಾಹ್ನ 2 ಗಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿ ಗೋಪಾಲ್ ಭಂಡಾರಿಯವರು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಹೃದಯಘಾತಕ್ಕೊಳಗಾಗಿದ್ದಾರೆ.
ವೋಲ್ವೋ ಬಸ್ ಮಂಗಳೂರು ನಿಲ್ದಾಣಕ್ಕೆ ತಲುಪಿದರೂ ಗೋಪಾಲ್ ಭಂಡಾರಿ ಬಸ್ ನಿಂದ ಇಳಿದಿರಲಿಲ್ಲ. ಈ ಹಿನ್ನೆಲೆ ನಿರ್ವಾಹಕ ಗಮನಿಸಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ಅವರನ್ನು ಕಂಡು ನಿರ್ವಾಹಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ತಕ್ಷಣ ಅವರನ್ನು ವೆನ್ಲೋಕ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಇದೀಗ ಅವರು ಮೃತಪಟ್ಟಿರುವ ಬಗ್ಗೆ ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.
ಎರಡು ಸಲ ಶಾಸಕರಾಗಿ ಆಯ್ಕೆ:
ಇನ್ನು ಗೋಪಾಲ ಭಂಡಾರಿ ಎರಡು ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಪಿ.ಶೆಣೈ ವಿರುದ್ಧ ಗೆಲುವು ದಾಖಲಿಸಿಕೊಂಡಿದ್ದರು. ಬಳಿಕ 2004ರ ಚುನಾವಣೆಯಲ್ಲಿ ಬಿಜೆಪಿಯ ವಿ. ಸುನಿಲ್ ಕುಮಾರ್ ವಿರುದ್ಧ ಸೋಲನುಭವಿಸಿದ್ದರು. ಆದರೆ 2008ರ ಚುನಾವಣೆಯಲ್ಲಿ ಮತ್ತೊಮ್ಮೆ ಗೋಪಾಲ ಭಂಡಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
2013ರ ಚುನಾವಣೆಯಲ್ಲಿ ಬಿಜೆಪಿಯ ವಿ. ಸುನಿಲ್ ಕುಮಾರ್ ವಿರುದ್ಧ ಮತ್ತೊಮ್ಮೆ ಸೋಲುಂಡಿದ್ದರು. ಹಾಗೂ ಅವರು ಸ್ಪರ್ಧಿಸಿದ್ದ ಅಂತಿಮ ಚುನಾವಣೆ 2018ರ ಚುನಾವಣೆಯಲ್ಲೂ ಕೂಡ ಹಾಲಿ ಶಾಸಕ ಸುನಿಲ್ ಕುಮಾರ್ ವಿರುದ್ಧ ಮತ್ತೊಮ್ಮೆ ಸೋಲನುಭವಿಸಿದ್ದರು.