ಪುತ್ತೂರು, ಜು 04 (Daijiworld News/SM): ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿಗಳೇ ಗ್ಯಾಂಗ್ ರೇಪ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ ಬುಧವಾರದಂದು ಆರೋಪಿಗಳನ್ನು ಬಂಧಿಸಲಾಗಿತ್ತು. ಗುರುವಾರದಂದು ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಬಜತ್ತೂರು ಗುರುನಂದನ್ (19), ಬಂಟ್ವಾಳದ ಪೆರ್ನೆ ಗ್ರಾಮ ಪ್ರಜ್ವಲ್ (19), ಬಂಟ್ವಾಳದ ಪೆರ್ನೆ ಗ್ರಾಮದ ಕಡಂಬು ಮನೆಯ ಕಿಶನ್ (19), ಪುತ್ತೂರಿನ ಆರ್ಯಾಪು ಗ್ರಾಮದ ಪಿಲಿಗುಂಡ ಮನೆಯ ಸುನಿಲ್ (19), ಬಂಟ್ವಾಳದ ಬರಿಮಾರು ಬಲ್ಯ ಮನೆ ಪ್ರಖ್ಯಾತ್ (19) ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಯುವತಿಯ ಬಳಿ ತೆರಳಿದ್ದ ಕಾಲೇಜಿನ ಸಹಪಾಠಿ ಸುನಿಲ್ ಎಂಬಾತ ಸಂತ್ರಸ್ತೆ ಬಳಿ ಮಾತನಾಡಲೆಂದು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್, ಪ್ರಖ್ಯಾತ್ ಎಂಬವರನ್ನು ಕೂಡಿಕೊಂಡು ಕಾರಿನ ಚಾಲಕನೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಹಾಗೂ ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಆ ತಂಡ ಜೀವ ಬೆದರಿಕೆ ಒಡ್ಡಿದ್ದಾರೆ. ಮಾತ್ರವಲ್ಲದೆ, ವಿಡಿಯೋ ಚಿತ್ರೀಕರಣ ನಡೆಸಿ ವೈರಲ್ ಮಾಡುವ ಬೆದರಿಕೆಯೊಡ್ಡಿದ್ದಾರೆ ಎಂದು ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ವಿವರಿಸಿದ್ದಳು.