ಮಂಗಳೂರು, ಜು 04 (Daijiworld News/MSP): ಕರ್ನಾಟಕದ ಮಂಗಳೂರು ಸೇರಿ ದೇಶದ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಹೀಗಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ ಬೀಳುವುದು ಖಚಿತವಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ ಮಂಗಳೂರು, ಅಹಮದಾಬಾದ್ ಹಾಗೂ ಲಖನೌ ವಿಮಾನ ನಿಲ್ದಾಣಗಳನ್ನು ಖಾಸಗಿ -ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಣೆಗಾಗಿ ಲೀಸ್ ಗೆ ನೀಡುವ ಪ್ರಸ್ತಾವಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷಾರಂಭದಲ್ಲಿ ಈ ಮೂರೂ ವಿಮಾನ ನಿಲ್ದಾಣಗಳನ್ನು 50 ವರ್ಷ ನಿರ್ವಹಣೆ ಮಾಡುವ ಗುತ್ತಿಗೆಯನ್ನು ಅದಾನಿ ಕಂಪನಿ ಪಡೆದುಕೊಂಡಿತ್ತು. ಇದಲ್ಲದೆ ಜೈಪುರ, ಗುವಾಹಟಿ, ತಿರುವನಂತಪುರ ವಿಮಾನ ನಿಲ್ದಾಣಗಳ ಗುತ್ತಿಗೆಯನ್ನೂ ಗಳಿಸಿತ್ತು.
ಪ್ರತಿ ಪ್ರಯಾಣಿಕನಿಗೆ ವಿಧಿಸಲಾಗುವ ಕನಿಷ್ಠ ಶುಲ್ಕ (ಪರ್ ಪ್ಯಾಸೆಂಜರ್ ಫೀ) ಆಧರಿಸಿ ಬಿಡ್ಡರ್ಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಆಯ್ಕೆ ಮಾಡಿತ್ತು. ಅದಾನಿ ಸಮೂಹ ಪ್ರತಿ ಪ್ರಯಾಣಿಕನಿಗೆ 115 ರೂ. ನೀಡುವುದಾಗಿ ಪರ್ ಪ್ಯಾಸೆಂಜರ್ ಫೀ ನೀಡಿದ್ದರೆ ಜಿಎಂಆರ್ 18 ರೂ. ಹಾಗೂ ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ 45 ರೂ. ಪ್ರಸ್ತಾವನೆ ಸಲ್ಲಿತ್ತು.