ಮಂಗಳೂರು, ಜು 03 (Daijiworld News/MSP): ಉದ್ಯೋಗಕ್ಕಾಗಿ ಕುವೈತ್ಗೆ ತೆರಳಿ ಮೂರು ತಿಂಗಳಿಂದ ಅತಂತ್ರವಾಗಿರುವ ಮಂಗಳೂರಿನ 35 ಯುವಕರು ಸ್ವದೇಶಕ್ಕೆ ಮರಳುವ ಹಾದಿ ಸನ್ನಿಹಿತವಾಗಿದ್ದು ಜು.13 ರಂದು ತಾಯ್ನಾಡಿಗೆ ಆಗಮಿಸುವುದು ಖಚಿತವಾಗಿದೆ.
ಈಗಾಗಲೇ 35 ಮಂದಿ ಯುವಕರಿಗೆ ಗವರ್ನಮೆಂಟ್ ಪ್ರಾಜೆಕ್ಟ್ ಲೆಟರ್ (ಜಿ.ಪಿ ಲೆಟರ್ -ನಿರ್ಗಮಿಸುವುದನ್ನು ಖಾತ್ರಿಪಡಿಸುವ ಪತ್ರ). ಹಾಗೂ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ದೊರಕಿದ್ದು ಇವರೆಲ್ಲರೂ ಕುವೈತ್ ನಿಂದ ಹೊರಟು ಮುಂಬೈ ವಿಮಾನ ನಿಲ್ದಾಣಕ್ಕೆ ರಾತ್ರಿ 8.30ಕ್ಕೆ ಬಂದಿಳಿಯಲಿದ್ದಾರೆ. ಇವರೆಲ್ಲರೂ ಮಂಗಳೂರಿಗೆ ಜು.14 ರಂದು ತಲುಪುವ ನಿರೀಕ್ಷೆ ಇದೆ.
ಕುವೈಟ್ನಿಂದ ದೂರವಾಣಿಯಲ್ಲಿ ಮೂಲಕ ದಾಯ್ಜಿವರ್ಲ್ಡ್ ಜೊತೆ ಮಾತನಾಡುತ್ತಾ, ಸಂತ್ರಸ್ತರದ ಬಜಾಲ್ನ ಅಬುಬಕ್ಕರ್ ಅವರು “ ಜು. 3ರ ಬುಧವಾರ ಬೆಳಿಗ್ಗೆ ಕುವೈತ್ ನ ಕಾಪಿಕೋ ಟ್ರಾವೆಲ್ಸ್ ಮತ್ತು ಟೂರ್ಸ್ ನೀಡಿದ ವಿಮಾನ ಟಿಕೆಟ್ಗಳು ನಮ್ಮ ಕೈಸೇರಿದ್ದು, ಈ ತಿಂಗಳ 13 ರಂದು ನಾವೆಲ್ಲರೂ ಜಜೀರಾ ಏರ್ವೇಸ್ ಮೂಲಕ ಮುಂಬೈಗೆ ಪ್ರಯಾಣಿಸುತ್ತೇವೆ. ನಮ್ಮನ್ನು ತೊಂದರೆಗೆ ಸಿಲುಕಿಸಿದ ಕಂಪನಿಯು ಜಿ.ಪಿ ಲೆಟರ್ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಿದೆ. ಹೀಗಾಗಿ ಊರಿಗೆ ಮರಳುವ ಹಾದಿ ಸುಗಮವಾಗಿ. ಟಿಕೆಟ್ ಹಾಗೂ ಊರಿಗೆ ಮರಳಲು ಸಹಾಯ ಮಾಡಿದ ಭಾರತೀಯ ಮೂಲದ ಉದ್ಯಮಿಗಳಿಗೆ ಮತ್ತು ಕುವೈತ್ನಲ್ಲಿರುವ ಭಾರತೀಯ ಪ್ರಾಯೋಜಕರಿಗೆ ನಾವೆಲ್ಲಾ ಖುಣಿಗಳಾಗಿದ್ದೇವೆ. ಸಂಕಷ್ಟಗೊಳಗಾದ ನಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಕರಿಸಿದ ವಿವಿಧ ಸಂಘ ಸಂಸ್ಥೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನಾವೆಲ್ಲರೂ ಅಭಾರಿಗಳಾದ್ದೇವೆ ಹಾಗೂ ನಮ್ಮ ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನ ಸೆಳೆದ ದಾಯ್ಜಿ ವಲ್ಡ್ ಸಂಸ್ಥೆಗೂ ಧನ್ಯವಾದ ಎಂದು ತಿಳಿಸಿದ್ದಾರೆ.