ಮಂಗಳೂರು, ಜು 03 (Daijiworld News/MSP): ಮೂವರು ವಿದ್ಯಾರ್ಥಿಗಳು ಸಹಪಾಠಿ ವಿದ್ಯಾರ್ಥಿನಿಗೆ ಮಾದಕ ವಸ್ತು ನೀಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವೀಡಿಯೋ ಮಾಡಿದ ಆರೋಪ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ.
ಈ ಘಟನೆ ಪುತ್ತೂರಿನ ಅಸುಪಾಸಿನಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಉಪ್ಪಿನಂಗಡಿ ಪ್ರದೇಶದವರು ಎಂದು ಶಂಕೆ ವ್ಯಕ್ತವಾಗಿದೆ. ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿ, ಪ್ರಜ್ಞೆ ಕಳೆದುಕೊಂಡಂತಹ ಸ್ಥಿತಿಯಲ್ಲಿದ್ದ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದಕ್ಷಿಣ ಕನ್ನಡದ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಈ ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಸ್ಪಿ ಅವರು , "ಓರ್ವ ಹುಡುಗಿ ಜೊತೆ 3 ರಿಂದ 4 ಮಂದಿ ಹುಡುಗರು ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವೀಡಿಯೊ ಒಂದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಪ್ರಸಾರ ಮಾಡುವುದು ಹಾಗೂ ಫೋನ್ ಹಾಗೂ ಕಂಪ್ಯೂಟರ್ ನಲ್ಲಿ ಉಳಿಸಿಕೊಳ್ಳುವುದು ಅಪರಾಧ. ಒಂದು ವೇಳೆ ವಿಡಿಯೋ ಪ್ರಸಾರ ಮಾಡಿದರೆ ಅವರನ್ನೇ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.