ಉಡುಪಿ, ಜು 03 (Daijiworld News/MSP): ಮಂಗಳೂರಿನಿಂದ ಬೆಳಗಾವಿ ಕಡೆಗೆ ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಡೀಸೆಲ್ ಹಾಕಲೆಂದು ರಾಷ್ಟ್ರೀಯ ಹೆದ್ದಾರಿ ಬಲಾಯಿಪಾದೆ ಯಿಂದ ಉದ್ಯಾವರ ಕಡೆ ಟ್ಯಾಂಕರನ್ನು ತಿರುಗಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ ಘಟನೆ ನಡೆದಿದೆ.
ಜು. 3 ರ ಬುಧವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಟ್ಯಾಂಕರ್ ಚಾಲಕ ಬಲಾಯಿಪಾದೆ ಬಳಿ ಯು ಟರ್ನ್ ಮಾಡಿ ಮತ್ತೆ ಮಂಗಳೂರು ಕಡೆ ಹೋಗುವ ದಾರಿಯಲ್ಲಿ ಉದ್ಯಾವರ ಪೆಟ್ರೋಲ್ ಪಂಪ್ ಗೆ ತಿರುಗಿಸಿದಾಗ ಟ್ಯಾಂಕರ್ ಉರುಳಿಬಿದ್ದಿದೆ. ಘಟನೆಯಲ್ಲಿ ಚಾಲಕ ಆಯಿವುದ್ದೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಗ್ಯಾಸ್ ತುಂಬಿದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕದಳ , ಉಡುಪಿ ನಗರಠಾಣೆ ಪೊಲೀಸ್ ಆಗಮಿಸಿದ್ದಾರೆ. ಯಾವುದೇ ವಾಹನ ಸಂಚರಿಸದಂತೆ ನಿರ್ಭಂದ ಹೇರಲಾಗಿದ್ದು ಘಟನೆ ನಡೆದ ಸ್ಥಳದಲ್ಲಿ ಅಂಗಡಿ, ಹೊಟೇಲ್ ತೆರೆಯದಂತೆ ಮಾಲಕರಿಗೆ ಪೊಲೀಸರು ಎಚ್ಚರಿಸಿದ್ದಾರೆ.