ಕುಂದಾಪುರ, ಜು 02 (Daijiworld News/SM): ಶಿಕ್ಷಣ ಇಲಾಖೆಯ ಹಠಮಾರಿ ನಿಲುವು ಹೀಗೆಯೇ ಮುಂದುವರಿದರೆ ಸರ್ಕಾರಿ ಶಾಲೆಗಳೆಲ್ಲ ಮುಚ್ಚಿಹೋಗಬಹುದು. ಭಾಷೆಗೊಬ್ಬರು ಶಿಕ್ಷಕರು, ಹೆಚ್ಚುವರಿ ಇತ್ಯಾದಿಗಳಿಂದ ಇದ್ದ ಶಿಕ್ಷಕರನ್ನೇ ವರ್ಗಾವಣೆ ಮಾಡುತ್ತಾ ಹೋದರೆ ಎಲ್ಲಾ ಶಾಲೆಗಳು ಬಂದ್ ಆಗುವ ದಿನ ದೂರವಿಲ್ಲ. ಅಧಿಕಾರಿಗಳು ಆದೇಶ ಎಂದು ಹಠ ಹಿಡಿದುಕುಳಿತುಕೊಂಡರೆ ಮಕ್ಕಳ ಶೈಕ್ಷಣಿಕ ಪ್ರಗತಿ ಏನಾದೀತು? ಶಿಕ್ಷಣದ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಶಿಕ್ಷಣಾಧಿಕಾರಿಗಳನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ತರಾಟೆಗೆ ತಗೆದುಕೊಂಡಿದ್ದಾರೆ.
ಜುಲೈ 2ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶಿಕ್ಷಕರ ವರ್ಗಾವಣೆ, ಪ್ರತಿಭಟನೆಯ ವಿಚಾರದಲ್ಲಿ ಆತುರದ ನಿರ್ಧಾರ ತಗೆದುಕೊಳ್ಳಬೇಡಿ ಎಂದರು.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಕೇವಲ ಮಟ್ಕಾದಿಂದ ಠಾಣೆಗೆ ತಿಂಗಳಿಗೆ ಒಂದು ಲಕ್ಷದ ಹತ್ತು ಸಾವಿರ ಕಮಿಷನ್ ಹೋಗುತ್ತಿದೆ. ಈ ರೀತಿ ಲೂಟಿ ನಡೆಯುತ್ತಿದೆಯೇ ಹೊರತು ಆರೋಪಿಗಳನ್ನು, ಬಿಡ್ಡರ್ಗಳನ್ನು ಬಂಧಿಸುದಿಲ್ಲ. ಬೇಕಿದ್ದರೆ ನಾವು ನೇರವಾಗಿ ಹಿಡಿದುಕೊಡುತ್ತೇವೆ ಎಂದು ಜಿ.ಪಂ.ಸದಸ್ಯ ಸುರೇಶ ಬಟ್ವಾಡಿ ಆರೋಪಿಸಿದರು.
ವ್ಯಾಪಕವಾಗಿ ದನ ಕಳ್ಳತನವಾಗುತ್ತಿದೆ. ಅದರ ಆರೋಪಿಗಳನ್ನು ಬಂಧಿಸುವುದಿಲ್ಲ, ದಂಧೆಕೋರರು ನಿರಂತರವಾಗಿ ಅಕ್ರಮ ಚಟುವಟಿಕೆ ಎಸಗುತ್ತಲೇ ಇದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಈ ವಿಚಾರವನ್ನು ಡಿವೈಎಸ್ಪಿ ಗಮನಕ್ಕೆ ತನ್ನಿ. ಮಟ್ಕಾವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇವರಿಂದ ಆಗದಿದ್ದರೆ ಎಸ್ಪಿಗೆ ದೂರು ಕೊಡಿ ಎಂದರು.
ಪಶ್ಚಿಮ ಘಟ್ಟ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಕೂಡಲೇ ಅದನ್ನು ಪತ್ತೆ ಹಚ್ಚಿ ನಾಶ ಮಾಡುವ ಕೆಲಸ ಮಾಡಿ ಎಂದು ಪೊಲೀಸ್ ಇಲಾಖೆ, ಅರಣ್ಯ ಇಲಾಖಾ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ನಮಗೆ ಆ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂಬ ಅಭಯರಣ್ಯ ಅಧಿಕಾರಿಗಳ ಮಾತಿಗೆ ಕೆರಳಿದ ಶಾಸಕರು, ನಿಮ್ಮ ವನಪಾಲಕರು, ವಾಚರುಗಳು ಏನು ಮಾಡುತ್ತಿದ್ದಾರೆ. ಅವರಿಂದ ತಿಳಿದುಕೊಳ್ಳಿ ಎಂದರು. ತೊಂಬಟ್ಟು ಪಾಲ್ಸ್ ಹೋಗುವಲ್ಲಿ ಅಭರಣ್ಯ ಅಧಿಕಾರಿಗಳು ಬೇಲಿ ನಿರ್ಮಿಸಿ ತಡೆ ಒಡ್ಡಿದ್ದಾರಂತೆ. ಕೂಡಲೇ ಅದನ್ನು ತೆರವುಗೊಳಿಸಿ ಎಂದು ಸೂಚಿಸಿದರು.