ಪುತ್ತೂರು ,ಜು 02 (Daijiworld News/MSP): ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಅರ್ಚನಾ ಅವರನ್ನು ಸಾರ್ವಜನಿಕವಾಗಿ ನಿಂದಿಸಿ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಡಾ.ಅರ್ಚನಾ ಕರಿಕ್ಕಳ ಅವರು ದೂರು ನೀಡಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕಿಯೊಬ್ಬಳನ್ನು ಭೇಟಿ ಮಾಡಲೆಂದು ತೆರಳಿದ್ದ ಜಿಪಂ ಅಧ್ಯಕ್ಷರು, ತಾನು ಕರೆದ ತಕ್ಷಣ ವಾರ್ಡಿಗೆ ಬಂದು ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಕರ್ತವ್ಯದಲ್ಲಿದ್ದ ವೈದ್ಯರ ಚೇಂಬರ್ ಗೆ ಹೋಗಿ ಬೆದರಿಕೆ ಒಡ್ಡಿ ಯದ್ವಾ ತದ್ವಾ ಬೈದು ಮೂದಲಿಸಿದ್ದರು. ಇದನ್ನು ಅವರ ಆಪ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಮೇಲಾಧಿಕಾರಿಗಳ ಸಲಹೆಯಂತೆ, ಜಿ.ಪಂ ಅಧ್ಯಕ್ಷರ ವಿರುದ್ದ ಕರ್ತವ್ಯಕ್ಕೆ ಅಡ್ಡಿ ಮಾಡಿದ ಮತ್ತು ಬೆದರಿಕೆ ಒಡ್ಡಿದ ಬಗ್ಗೆ ಡಾ. ಅರ್ಚನಾ ಪೊಲೀಸ್ ದೂರು ನೀಡಿದ್ದರು. ಜೂನ್ 29ರಂದು ಸಂಜೆ ಈ ಪ್ರಕರಣ ನಡೆದಿತ್ತು.
ಇದೇ ವೇಳೆ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಶಾಖೆ ಕೂಡಾ ಎಫ್ ಐ ಆರ್ ದಾಖಲಿಸುವಂತೆ ಆಗ್ರಹಿಸಿತ್ತು. ವೈದ್ಯೆಗೆ ಸೂಕ್ತ ನ್ಯಾಯ ಸಿಗದಿದ್ದರೆ ಸಂಘಟನೆ ವತಿಯಿಂದ ವೈದ್ಯರು ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಶಾಖೆಯ ಅಧ್ಯಕ್ಷ ಡಾ.ಗಣೆಶ್ ಪ್ರಸಾದ್ ಮುದ್ಲಾಜೆ ಕೂಡಾ ಎಚ್ಚರಿಕೆ ನೀಡಿದ್ದರು. "ತಾನು ಕರೆದ ತಕ್ಷಣ ಬಂದಿಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿ ಇತರ ರೋಗಿಗಳ ಪರಿಸ್ಥಿತಿ ಗಮನಿಸದೆ ಜಿ.ಪಂ ಅಧ್ಯಕ್ಷರು ದರ್ಪದಿಂದ ವರ್ತಿಸಿದ್ದು, ಸಾರ್ವಜನಿಕರೆದು ತೇಜೋವಧೆ ಮಾಡಿದ್ದಾರೆ. ಗರ್ಭಿಣಿಯಾಗಿರುವ ವೈದ್ಯೆಗೆ ಇದರಿಂದ ಮಾನಸಿಕ ಆಘಾತವಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ದೌರ್ಜನ್ಯ ನಡೆಸಿದರು ಆರೋಪಿಸಿ ತಾಲೂಕಿನ ಕೌಡಿಚಾರ್ ನಿವಾಸಿ ದಲಿತ ಬಾಲಕಿಯೊಬ್ಬಳು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಕೆಯನ್ನು ನೋಡಲು ಜಿಪಂ ಅಧ್ಯಕ್ಷೆ ಹೋಗಿದ್ದರು. ವಾರ್ಡ್ ಗೆ ಬಂದು ಕರ್ತವ್ಯ ನಿರತ ಡಾಕ್ಟರ್ ತನಗೆ ವಿವರಣೆ ನೀಡಲಿಲ್ಲ ಎಂಬ ಕಾರಣಕ್ಕೆ ವೈದ್ಯರ ಚೇಂಬರ್ ಗೆ ಹೋಗಿ ಬೆದರಿಕೆ ಒಡ್ಡಿದ ವೀಡಿಯೋ ವೈರಲ್ ಆಗಿತ್ತು.