ಕುಂದಾಪುರ,ಜು 02 (Daijiworld News/MSP): ಕೃಷಿಯತ್ತ ಯುವ ಜನರು ಬರುತ್ತಿಲ್ಲ ಎನ್ನುವ ಮಾತು ಸಾರ್ವತ್ರಿಕವಾಗಿದೆ. ಇದು ಕಳವಳಕಾರಿ ಅಂಶ ಎನ್ನುವುದೂ ಕೂಡಾ ಅಷ್ಟೇ ವೇದ್ಯ. ಆದರೆ ಪಡುಕೋಣೆ ಸಮೀಪ ಒಂದಿಷ್ಟು ಯುವಕರ ತಂಡ ಸಾಮೂಹಿಕವಾಗಿ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಪಣ ತೊಟ್ಟಿದ್ದಾರೆ. ಡಿವೈಎಫ್ಐ ಪಡುಕೋಣೆ ಘಟಕದ ಹಡಿಲು ಭೂಮಿಯಲ್ಲಿ ಸಾಗುವಳಿ ಮಾಡುವ ಯೋಜನೆ ಯುವ ಜನಾಂಗಕ್ಕೆ ಮಾದರಿಯಾಗಿದೆ.
ಭತ್ತದ ಬೇಸಾಯ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಕಾರ್ಮಿಕರ ಕೊರತೆಯಿಂದ ಅನ್ನದ ಬಟ್ಟಲುಗಳಾಗಿದ್ದ ಕರಾವಳಿಯ ಭತ್ತದ ಗದ್ದೆಗಳು ಹಡಿಲು ಬಿದ್ದಿವೆ. ಮುಖ್ಯವಾಗಿ ಯುವಜನತೆ ಗದ್ದೆಯತ್ತ ಬಾರದಿರುವುದೆ ಈ ಹಿನ್ನೆಡೆಗೆ ಕಾರಣ. ಈ ಸಂದರ್ಭದಲ್ಲಿ ಪಡುಕೋಣೆಯ ಯುವ ಪಡೆ ಹೊಸದೊಂದು ಸಾಹಸಕ್ಕೆ ಮುಂದಾಗಿದೆ. ನಾಲ್ಕಾರು ವರ್ಷಗಳಿಂದ ಸಾಗುವಳಿ ಮಾಡದೆ ಹಡಿಲು ಬೀಳಿಸಲಾದ ಗದ್ದೆಯಲ್ಲಿ ಬಂಗಾರದ ಬೆಳೆಯನ್ನು ಬೆಳೆಯ ಹೊರಟ ಈ ಯುವಕರ ಕಥೆ ಪ್ರಸ್ತುತ ಅನುಕರಣೀಯವಾಗಿದೆ.
ಡಿವೈಎಫ್ಐ ಪಡುಕೋಣೆ ಘಟಕ ಸಾಮಾಜಿಕವಾಗಿ ಸಕ್ರೀಯತೆಯಿಂದ ತೊಡಗಿಸಿಕೊಂಡ ಸಂಸ್ಥೆ. ನಾವು ಏನಾದರೂ ಯುವ ಜನತೆಗೆ ಸ್ಪೂರ್ತಿಯಾಗುವಂಥಹ ಕಾರ್ಯ ಮಾಡಬೇಕು ಎನ್ನುವ ಸಂಕಲ್ಪ ಮಾಡಿದರು. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಪಡುಕೋಣೆ ಸಮೀಪ ಹಡಿಲು ಬಿದ್ದಿರುವ ಫಲವತ್ತಾದ ಭತ್ತದ ಗದ್ದೆಗಳು. ಈ ಹಡಿಲು ಭೂಮಿಯಲ್ಲಿ ಸಾಗುವಳಿ ಮಾಡಿದರೆ ಹೇಗೆ? ಹೀಗೋಂದು ಯೋಚನೆ ಮಾಡಿದ ಡಿವೈಎಫ್ಐ ಸಂಗಾತಿಗಳು ಜಮೀನಿನ ಮಾಲಕರ ಹತ್ತಿರ ಮಾತನಾಡಿದರು. ಯುವಕರ ಉತ್ಸಾಹ ಕಂಡ ಜಮೀನು ಮಾಲಿಕರು ಸಾಗುವಳಿ ಮಾಡಿ, ಲಾಭ ಆದರೆ ಏನಾದರೂ ಕೂಡಿ ಎನ್ನುವ ಮೌಖಿಕ ಒಪ್ಪಿಗೆ ಸೂಚಿಸಿದರು. ಮತ್ತೆ ಈ ಯುವಪಡೆ ತಡ ಮಾಡಲಿಲ್ಲ. ಸುಮಾರು 3.5 ಎಕ್ರೆ ಹಡಿಲು ಭೂಮಿಯಲ್ಲಿ ಸಾಗುವಳಿಗೆ ಗದ್ದೆಯನ್ನು ಸಿದ್ಧಪಡಿಸುವಲ್ಲಿ ನಿರತರಾದರು.
ಪ್ರಾರಂಭದಲ್ಲಿ ಮಣ್ಣು ಪರೀಕ್ಷೆ ನಡೆಸಿ, ಮಣ್ಣಿಗೆ ಶಿಫಾರಸ್ಸು ಮಾಡಿದ ಗೊಬ್ಬರ, ಸುಣ್ಣ ಬೆರೆಸಿದರು. ಸಾಕಷ್ಟು ಪ್ರಮಾಣದಲ್ಲಿ ಛಾಪೆ ನೇಜಿ ತಯಾರಿಸಿದರು. ಜೂನ್ 30 ರಂದು ಒಂದೇ ದಿನ 3.5ಎಕರೆ ಪ್ರದೇಶದ ಸಾಲು ನಾಟಿಗೆ ಸಂಕಲ್ಪ ಮಾಡಿದರು. ಸುಮಾರು ೩೫ ಜನ ಮಹಿಳೆಯರು ನಾಟಿಗೆ ಗೊತ್ತು ಮಾಡಿದರು. 30ಕ್ಕೂ ಅಧಿಕ ಡಿವೈಎಫ್ಐ ಗೆಳೆಯರು ಕೆಸರು ಗದ್ದೆಗಿಳಿದರು. ಯುವಕರ ಉತ್ಸಾಹ ಕಂಡ ವಿದ್ಯಾರ್ಥಿಗಳು ಕೂಡಾ ಮುಂದೆ ಬಂದರು.
ರವಿವಾರ ಬೆಳಿಗ್ಗೆಯಿಂದ ಮಾರಸ್ವಾಮಿ ದೇವಸ್ಥಾನದ ಹಿಂಭಾಗದ ವಿಶಾಲ ಗದ್ದೆಯಲ್ಲಿ ಜನರದ್ದೆ ಜಂಗುಳಿ. ಟಿಲ್ಲರ್ಗಳು ಉಳುಮೆ ಮಾಡುತ್ತಿದ್ದರೆ, ಗದ್ದೆಯ ಆಚೆ ಭಾಗದ ಈಚೆ ಭಾಗದ ತನಕ ನಾಟಿ ಮಾಡುವ ಮಹಿಳೆಯರ ಸಾಲು ಬಹು ಹಿಂದಿನ ಕಂಬಳಗದ್ದೆ ನಾಟಿಯ ನೆನಪನ್ನು ಮೆಲುಕು ಹಾಕಿತ್ತು. ಗದ್ದೆಯಲ್ಲಿ ಹಾರೆ ಹಿಡಿದು ಬದು ಸರಿ ಪಡಿಸುವಲ್ಲಿಂದ ಮೂಲೆ ಕೊಚ್ಚುವುದು, ದಂಡೆ ಒಡೆಯುವುದು, ಸಮತಟ್ಟು ಮಾಡುವುದು, ನೇಜಿ ತಂದು ಕೊಡುವುದು, ಸಾಲಿಗೆ ಹಗ್ಗ ಹಿಡಿಯುವುದು, ರಸ ಗೊಬ್ಬರ ಬಿಕ್ಕುವುದು ಹೀಗೆ ಒಂದೊಂದು ಕೆಲಸದಲ್ಲಿಯೂ ಅತೀವ ಉತ್ಸಾಹ, ಶೃದ್ದೆ ಕಂಡು ಬಂತು.
ಈ ಯುವಕರು ಒಬ್ಬಬ್ಬರು ಒಂದೊಂದು ರಂಗದಲ್ಲಿ ಬ್ಯುಸಿಯಿರುವವರು. ಕೆಲಸ ಒತ್ತಡದ ನಡುವೆ ಭಾನುವಾರ ಕೆಸರು ಗದ್ದೆಯಲ್ಲಿ ಕೃಷಿ ಖುಷಿಯ ಸಂಭ್ರಮ ಅನುಭವಿಸಿದರು. ಕೆಸರು ಗದ್ದೆಯಲ್ಲಿ ಕೆಲಸ ಮಾಡುವ ಅವಕಾಶಗಳೇ ಇಲ್ಲದ ಈ ದಿನಗಳಲ್ಲಿ ಮೈ ಕೈ ಕೆಸರು ಮಾಡಿಕೊಂಡು ಸಂಭ್ರಮ ಪಟ್ಟ ಪರಿ ಅನನ್ಯ. ಕೃಷಿ ಸಂಸ್ಕೃತಿಗೆ ಭತ್ತದ ಕೃಷಿಗೆ ಹೆಸರಾದ ಪಡುವಣ ಕಡಲಿನ ಸಮೀಪದ ಸುಂದರ ನಾಡು ಪಡುಕೋಣೆ.
ಡಿವೈಎಫ್ಐ ಗೆಳೆಯರ ಈ ಕಹಾನಿ ಇಲ್ಲಿಗೆ ಮುಗಿಯುವುದಿಲ್ಲ ಕೃಷಿ ಹೆಜ್ಜೆಯನ್ನು ಮುಂದೆ ಮುಂದೆ ಮಾದರಿಯಾಗಿ ಇರಿಸುವ ಇಂಗಿತ ಹೊಂದಿದ್ದಾರೆ. ಕೃಷಿಯೋಗ್ಯ ಭೂಮಿ ವ್ಯರ್ಥವಾಗಿ ಹಡಿಲು ಬಿದ್ದು ಫಲವತ್ತಾತೆ ಕಳೆದುಕೊಳ್ಳುವ ಬದಲು ಸಾಗುವಳಿ ಮಾಡಬೇಕಿದೆ. ಮುಖ್ಯವಾಗಿ ವಿಜ್ಞಾನ, ತಂತ್ರಜ್ಞಾನ, ಉನ್ನತ ಶಿಕ್ಷಣ ಎಷ್ಟೇ ಎತ್ತರಕ್ಕೇರಿದರೂ ಕೃಷಿ ಸಂಸ್ಕೃತಿಯ ಮುಂದೆ ಅದೆಲ್ಲಾ ಗೌಣ. ಅನ್ನದಾತ ಉಳುಮೆ ಮಾಡಿದರೆ ಮಾತ್ರ ಉಣ್ಣಲು ಅನ್ನ. ಎಲ್ಲರೂ ಅಲಸ್ಯ ಮನೋಭಾವ ತಾಳಿ ಕೃಷಿ ಕೈ ಬಿಟ್ಟರೆ ಉಣ್ಣುವ ಅನ್ನವನ್ನು ಯಂತ್ರಗಳು ತಯಾರಿಸಿ ಕೊಡುವ ಕಾಲ ಬರಬಹುದು. ಅದಕ್ಕೆ ಯುವ ಜನಾಂಗ ಜಾಗೃತರಾಗಬೇಕು. ಕೃಷಿ ಖುಷಿಕೊಡುತ್ತದೆ. ನಾವೆಲ್ಲಾ ಒಟ್ಟಾಗಿ ಕೃಷಿಯನ್ನು ಪ್ರೀತಿಸುವ, ಭತ್ತದ ಭೂಮಿಯನ್ನು ಹಸನುಗೊಳಿಸುವ ಎನ್ನುವ ಉದಾತ್ತ ಸಂದೇಶ ನೀಡಿದ್ದಾರೆ.
ಯುವಜನರನ್ನು ಕೃಷಿ ಮಾಡುವುದರತ್ತ ಉತ್ತೇಜಿಸಬೇಕು ಎನ್ನುವುದು ನಮ್ಮ ಉದ್ದೇಶ. ಆ ಹಿನ್ನೆಲೆಯಲ್ಲಿ ನಮ್ಮ ತಂಡ ತೀರ್ಮಾನ ತಗೆದುಕೊಂಡು ಈ ಪ್ರಯತ್ನ ಮಾಡಿದ್ದೇವೆ. ಸುಮಾರು 3.5 ಎಕ್ರೆ ಭತ್ತದ ಬೆಳೆಗೆ ಯೋಗ್ಯವಾದ ಭೂಮಿ ನಾಲ್ಕಾರು ವರ್ಷಗಳಿಂದ ಹಡಿಲು ಬಿದ್ದಿತ್ತು. ಆ ಭೂಮಾಲಕರನ್ನು ಒಪ್ಪಿಸಿ, ಕೃಷಿಗೆ ಸಿದ್ಧಪಡಿಸಿ ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ನಡೆಸಿ, ಅಗತ್ಯ ಪೋಷಕಾಂಶಗಳನ್ನು ಬಳಕೆ ಮಾಡಿ ಈಗ ನಾಟಿ ಮಾಡಿದ್ದೇವೆ. ನಮ್ಮೆಲ್ಲಾ ಡಿವೈಎಫ್ಐ ಗೆಳೆಯರು ಹೆಗಲಿಗೆ ಹೆಗಲು ಕೊಟ್ಟಿದ್ದಾರೆ-ನಾಗರಾಜ ಕುರು, ಅಧ್ಯಕ್ಷರು, ಡಿವೈಎಫ್ಐ ಪಡುಕೋಣೆ ಘಟಕ.
ಭತ್ತದ ಗದ್ದೆಗಳ ಹಡಿಲು ಬಿಡಬಾರದು. ಯುವಜನರು ಕೃಷಿಯತ್ತ ಮನಸ್ಸು ಮಾಡಬೇಕು, ಜನರಲ್ಲಿ ಜಾಗೃತಿ ಮೂಡಬೇಕು ಎನ್ನುವುದಕ್ಕೆ ನಮ್ಮದೊಂದು ಪ್ರಯತ್ನ. ಭತ್ತದ ಬೇಸಾಯಕ್ಕೆ ಮುಖ್ಯವಾಗಿ ಕಾರ್ಮಿಕರ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಉಧ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸುವ ಪ್ರಯತ್ನ ಮಾಡುತ್ತೇವೆ-ರಾಜೇಶ, ಗ್ರಾ.ಪಂ.ಸದಸ್ಯ