ಮಂಗಳೂರು,ಜು 02 (Daijiworld News/MSP): ಕರಾವಳಿಯಲ್ಲಿ ಶಾಂತಿ ಕದಡಲು ಕಾರಣವಾಗುತ್ತಿರುವ ಗೋ ಕಳ್ಳತನದ ವಿರುದ್ದ ಸಮರ ಸಾರಿರುವ ನಗರ ಪೊಲೀಸ್ ಇಲಾಖೆ ಈ ಹಿನ್ನಲೆಯಲ್ಲಿ ಜು.02 ರ ಮಂಗಳವಾರ, ಬೆಳ್ಳಂಬೆಳಗ್ಗೆ ಗೋ ಕಳ್ಳತನ, ಸಾಗಾಟ, ವಧೆ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದ ಗೋ ದಂಧೆಕೋರ ಅಪರಾಧಿಗಳಿಗೆ ಮತ್ತು ದಂಧೆಕೋರರಿಂದ ಜಾನುವಾರುಗಳನ್ನು ಕೊಳ್ಳುವವರಿಗೆ ನಗರ ಪೊಲೀಸ್ ಆಯುಕ್ತ ಡಾ.ಸಂದೀಪ್ ಪಾಟೀಲ್ ಖಡಕ್ ವಾರ್ನಿಂಗ್ ನೀಡುವ ಮೂಲಕ ಎಚ್ಚರಿಕೆಯನ್ನು ರವಾನಿಸಿದರು.
ಒಟ್ಟು 102 ಜನ ಗೋ ದಂಧೆಕೋರರ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ ನಗರ ಪೊಲೀಸ್ ಆಯುಕ್ತರು, ಇನ್ನು ಮುಂದೆ ಗೋ ಕಳ್ಳತನ, ಅಕ್ರಮ ಸಾಗಾಟ, ಗೋ ವಧೆ ಮುಂತಾದ ಯಾವುದೇ ಘಟನೆಗಳಲ್ಲಿ ಭಾಗವಹಿಸದಂತೆ ತಾಕೀತು ಮಾಡಿದರು.
ಇದೇ ವೇಳೆ ಗೋ ದಂಧೆಕೋರ ನಟೋರಿಯಸ್ ಅಪರಾಧಿಗಳಾದ , ಸದ್ದಾಂ, ಹಕೀಂ, ಫೈಸಲ್ , ದಾವುದ್ ಮುಂತಾದವರು, ಮತ್ತೆ ಬಾಲ ಬಿಚ್ಚದಂತೆ ವಿಚಾರಣೆ ನಡೆಸಿ ಬೆವರಿಳಿಸಿದರು.
ಗೋ ಕಳವು ಮತ್ತು ಅಕ್ರಮ ಸಾಗಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಇವುಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲು ವಿಶೇಷ ತಂಡವನ್ನು ರಚನೆ ಮಾಡಿದೆ. ಗೋ ಕಳ್ಳತನಕ್ಕೆ ಸಂಬಂಧಿಸಿ ಹಳೆ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದ್ದು, ಗೋ ಕಳ್ಳರನ್ನು ಮಟ್ಟಹಾಕಲು ನಗರ ಪೊಲೀಸ್ ಇಲಾಖೆ ಗಂಭೀರ ಪ್ರಯತ್ನ ನಡೆಸುತ್ತಿದೆ.