ಮಂಗಳೂರು, ಜು02(Daijiworld News/SS): ಈಗಾಗಲೇ ನಗರದಲ್ಲಿ ಜಾರಿಯಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಗೆ ಅನಗತ್ಯ ಖರ್ಚು ಮಾಡುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೂಚಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತರಬೇಕು. ಯೋಜನೆ ಇದೆ ಎಂಬ ಕಾರಣಕ್ಕೆ ಅನಗತ್ಯ ಖರ್ಚು ಮಾಡುವುದು ಬೇಡ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಜಾರಿಯಲ್ಲಿರುವ ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅನುದಾನ ಇದೆ ಎಂದ ಮಾತ್ರಕ್ಕೆ ಪ್ರಾಮುಖ್ಯ ಅಲ್ಲದ ಯೋಜನೆಗಳನ್ನು ಜಾರಿಗೆ ತರುವುದು ಬೇಡ ಎಂದು ಹೇಳಿದ್ದಾರೆ.
ಇದೇ ವೇಳೆ ಸಚಿವ ಯು ಟಿ ಖಾದರ್, ಬಾವುಟಗುಡ್ಡೆ ಠಾಗೋರ್ ಪಾರ್ಕ್ನಲ್ಲಿ ಆಕರ್ಷಕ ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿ ನಡೆಸುವ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.