ಕಾಸರಗೋಡು, ಜು 01(Daijiworld News/SM): ನಗರದ ತಳಂಗರೆಯ ಜೈನುಲ್ ಆಬಿದ್ ಎಂಬ ಯುವಕನ ಕೊಲೆ ಪ್ರಕರಣದ ಆರೋಪಿಯೋರ್ವನನ್ನು ತಂಡವೊಂದು ಹತ್ಯೆಗೆ ಯತ್ನಿಸಿದ ಘಟನೆ ವಿದ್ಯಾನಗರದಲ್ಲಿ ನಡೆದಿದ್ದು, ಪ್ರಕರಣವನ್ನು ಖಂಡಿಸಿ ಬಿಎಂಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಬಿಎಂಎಸ್ ಜಿಲ್ಲಾಧ್ಯಕ್ಷ ಪಿ. ಮುರಳೀಧರನ್, ಜಿಲ್ಲಾ ಕಾರ್ಯದರ್ಶಿ ಕೆ.ಎ.ಶ್ರೀನಿವಾಸ್, ಪಿ.ಬಿ.ಸತ್ಯನಾಥ್ ಮೊದಲಾದವರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಬಳಿಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಬೇಕು. ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ:
ಜೂನ್ ಮೂವತ್ತರ ರವಿವಾರದಂದು ವಿದ್ಯಾನಗರ ನೆಲ್ಕಲದ ಪ್ರಶಾಂತ್(33) ಎಂಬವರ ಹತ್ಯೆಗೆ ಯತ್ನ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದರು. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದಲ್ಲಿ ತಲೆ ಹೊರೆ ಕಾರ್ಮಿಕನಾಗಿದ್ದ ಪ್ರಶಾಂತ್ ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಸರಕಾರಿ ಕಾಲೇಜು ಪರಿಸರದ ರಸ್ತೆಯಲ್ಲಿ ಕಾರಿನಲ್ಲಿ ಬಂದ ತಂಡವು ಬೈಕ್ ಗೆ ಡಿಕ್ಕಿ ಹೊಡೆಸಿ ಬಳಿಕ ಪ್ರಶಾಂತ್ ಮೇಲೆ ಮಾರಾಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಗಾಯಗೊಂಡ ಪ್ರಶಾಂತ್, 2014ರ ಡಿಸೆಂಬರ್ 22ರಂದು ಎಸ್ ಡಿ ಪಿ ಐ ಕಾರ್ಯಕರ್ತನಾಗಿದ್ದ ತಳಂಗರೆಯ ಆಬಿದ್ ನನ್ನ ನಗರದ ಟ್ರಾಫಿಕ್ ಜಂಕ್ಷನ್ ಸಮೀಪದ ಅಂಗಡಿಗೆ ನುಗ್ಗಿ ಕೊಲೆಗೈದ ಪ್ರಕರಣದ ಮೂರನೇ ಆರೋಪಿಯಾಗಿದ್ದಾನೆ.