ಮಂಗಳೂರು, ಜೂ30(Daijiworld News/SS): ಮಂಗಳೂರು ಹೊರವಲಯದ ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀಕ್ಷಾ ಸ್ಥಿತಿ ಗಂಭೀರವಾಗಿಯೇ ಇದೆ. ಆರೋಪಿ ಸುಶಾಂತ್ಗೆ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ, ಸಚಿವ ಯು.ಟಿ ಖಾದರ್ ಆಸ್ಪತ್ರೆಗೆ ಭೇಟಿ ನೀಡಿದ್ದು ವಿದ್ಯಾರ್ಥಿ ದೀಕ್ಷಾ ಅವರ ಆರೋಗ್ಯ ವಿಚಾರಿಸಿದ್ದಾರೆ. ಐಸಿಯು ಒಳಗೆ ತೆರಳಿ ವೈದ್ಯರು, ಪೋಷಕರ ಜತೆ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯ ಕುಟುಂಬಕ್ಕೆ ರೂ.50ಸಾವಿರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಮಾತ್ರವಲ್ಲ, ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಯುವತಿ ಹಲ್ಲೆಗೊಳಗಾಗುತ್ತಿದ್ದ ಸಮಯದಲ್ಲಿ ಉಳಿದವರು ನೋಡುತ್ತಾ ನಿಂತಿದ್ದರು. ಘಟನೆ ವೇಳೆ ತಡೆಯುವ ಬದಲು ವಿಡಿಯೋ ರೆಕಾರ್ಡ್ ಮಾಡಲು ನಿಂತಿದ್ದು ವಿಪರ್ಯಾಸ. ಆರೋಪಿ ಅಮಲು ಪದಾರ್ಥ ಸೇವಿಸಿ ಕೃತ್ಯ ಎಸಗಿರುವುದು ವೈದ್ಯರ ವರದಿಯಲ್ಲಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ದಾಖಲಾದ ದೀಕ್ಷಾಗೆ ಚಿಕಿತ್ಸೆ ನೀಡಲು ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ನಿರಂತರ ಶ್ರಮಿಸುತ್ತಿದೆ.
ಘಟನೆಯ ವಿವರ:
ಕಾರ್ಕಳದಲ್ಲೇ ಇದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ಎಂಬಿಎ ಕಲಿಯುತ್ತಿರುವ ದೀಕ್ಷಾ (22) ಶುಕ್ರವಾರ ಸಂಜೆ ಊರಿಗೆ ಆಗಮಿಸಿದ್ದು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿ ಬಸ್ಸಿನಿಂದ ಇಳಿದು ಬಗಂಬಿಲದ ಮನೆ ಕಡೆ ತೆರಳುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ಸುಶಾಂತ್ ಮನೆಯಿಂದ ಅನತಿ ದೂರದಲ್ಲಿ ಆಕೆಯನ್ನು ಅಡ್ಡಗಟ್ಟಿ ಚೂರಿಯಿಂದ 12 ಬಾರಿ ಇರಿದಿದ್ದಾನೆ. ಬಳಿಕ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಸ್ಪತ್ರೆ ಸಿಬಂದಿ, ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.