ಮಲ್ಪೆ,ಜೂ29(DaijiworldNews/AZM):ಪುದು ಗ್ರಾಮ ಪಂಚಾಯತ್ ಸದಸ್ಯ,ಮೀನು ವ್ಯಾಪಾರಿ ಮಹಮ್ಮದ್ ರಿಯಾಜ್ ಎಂಬವರನ್ನು ಮಲ್ಪೆ ಬಂದರಿನಲ್ಲಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ೯ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಲ್ಪೆ ಬಂದರಿನ ಮರಿನಾ ಐಸ್ ಪ್ಲಾಂಟ್ ಎದುರು ಜೂನ್ 7ರಂದು ಮುಂಜಾನೆ 04:30 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪರಂಗಿಪೇಟೆಯ ಮೀನು ವ್ಯಾಪಾರಿ ,ಪುದು ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ರಿಯಾಜ್ನನ್ನು ಮಾರಕಾಸ್ತ್ರಗಳಿಂದ ತಲೆ, ಕತ್ತು, ಕೈ ಮತ್ತು ಕಾಲುಗಳಿಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳ ಮತ್ತು ವಾಹನದ ಪತ್ತೆ ಬಗ್ಗೆ ನಗರ ವೃತ್ತ ಹಾಗೂ ಡಿ.ಸಿ.ಐ.ಬಿ ಉಡುಪಿಯ ಅಧಿಕಾರಿ ಹಾಗೂ ಸಿಬ್ಬಂದಿಯವರ 2 ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು,ಪರಂಗಿಪೇಟೆಯ ಮಹಮ್ಮದ್ ಇಸ್ಮಾಯಿಲ್ (47 ),ಮಹಮ್ಮದ್ ಗೌಸ್ (33 ) ಒಳಚ್ಚಿಲ್ನ ಅಬ್ದುಲ್ ಕೈಸ್ (61 ), ಮಹಮ್ಮದ್ ಆಶೀಕ್ ಯಾನೆ ಕೋಚಿ, ( 22) ಮೊಂಟೆಪದವು ಮಹಮ್ಮದ್ ಮುನೀಜ್ (21 ) , ಮುಡಿಪುವಿಮ ಅನ್ಸಾರ್ (22 ) ಮಾರ್ನಮಿ ಕಟ್ಟೆ ತೌಸೀರ್ ಯಾನೆ ಪತ್ತೊಂಜಿ, (25) ಅಡ್ಯಾರ್ ಮಹಮ್ಮದ್ ತೌಸಿಪ್ ಯಾನೆ ತಚ್ಚು (25 ), ಫರಂಗಿಪೇಟೆ ಮಹಮ್ಮದ್ ಮುಸ್ತಾಕ್ ಯಾನೆ ಮಿಸ್ತಾ ಯಾನೆ ಬಾಬಿ (23 ) ಎಂದು ಗುರುತಿಸಲಾಗಿದೆ.
ಈ ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಒಂದು ಲಾರಿ, ಒಂದು ಕಾರು ಹಾಗೂ 3 ತಲವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ದಸ್ತಗಿರಿ ಮಾಡಿರುವ ಆರೋಪಿಗಳೆಲ್ಲರೂ ಮಂಗಳೂರು ಜಿಲ್ಲೆಯವರಾಗಿದ್ದು, ಆರೋಪಿಗಳ ಪೈಕಿ ಮೊಹಮ್ಮದ್ ತೌಸೀರ್ @ ಪತ್ತೊಂಜಿಯ ಮೇಲೆ ಬಂಟ್ವಾಳ ಗ್ರಾಮಾಂತರ, ಕಂಕನಾಡಿ ಪೊಲೀಸ್ ಠಾಣೆ, ಕದ್ರಿ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಹಲ್ಲೆ ಮುಂತಾದ 5 ಪ್ರಕರಣಗಳು, ಆರೋಪಿ ಮಹಮ್ಮದ್ ತೌಸಿಪ್ ಯಾನೆ ತಚ್ಚುನ ಮೇಲೆ ಕದ್ರಿ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಪೂಂಜಾಲಕಟ್ಟೆ ಪೊಲೀಸ್ ಠಾಣೆ ಮತ್ತು ಮಂಗಳೂರು ಉರ್ವಾ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆಯತ್ನ ಪ್ರಕರಣಗಳು ಹಾಗೂ ಆರೋಪಿ ಮಹಮ್ಮದ್ ಮುಸ್ತಾಕ್ ಯಾನೆ ಮಿಸ್ತಾ ಯಾನೆ ಬಾಬಿ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ