ಬೆಂಗಳೂರು,ಸೆ12: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ನೂರಾರು ಪತ್ರಕರ್ತರು,ವಿವಿಧ ಪ್ರಗತಿಪರ, ದಲಿತ, ರೈತಪರ ಹೀಗೆ ಹಲವು ಸಂಘಟನೆಗಳು ಪ್ರತಿರೋಧ ರ್ಯಾಲಿ ಹಮ್ಮಿಕೊಂಡಿದ್ದರು. ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಸೇರಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.
ಇನ್ನು ರ್ಯಾಲಿಯಲ್ಲಿ ತಲೆಗೆ ಕಪ್ಪು ಪಟ್ಟಿ ಧರಿಸಿ, "ನಾನು ಗೌರಿ", "ನಾವೆಲ್ಲರೂ ಗೌರಿ", ಸಾಯೋದಿಲ್ಲ ಸಾಯೋದಿಲ್ಲ ಗೌರಿ ಚಿಂತನೆ ಸಾಯೋದಿಲ್ಲ ಎಂಬಿತ್ಯಾದಿ ಘೋಷಣೆ ಕೂಗು ಸಾಮಾನ್ಯವಾಗಿತ್ತು. ಸಿಪಿಐ(ಎಂ), ಕರ್ನಾಟಕ ಜನಶಕ್ತಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಕೂಡ ರ್ಯಾಲಿಯಲ್ಲಿ ಭಾಗವಹಿಸಿದ್ದವು. ಸಿಪಿಐಎಂ ಪ್ರಧಾನ ಕಾರ್ಯದರ್ಶಿ, ಸೀತಾರಾಮ ಯೆಚೂರಿ, ಸಾಮಾಜಿಕ ಕಾರ್ಯಕರ್ತೆ ಮೇದಾ ಪಾಟ್ಕರ್, ಪತ್ರಕರ್ತೆ ಪಿ. ಸಾಯಿನಾಥ್, ಸಾಗರಿಕಾ ಘೋಷ್, ಸ್ವರಾಜ್ ಇಂಡಿಯಾ ಮುಖಂಡ, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ತೀಸ್ತಾ ಸೆತಲ್ವಾಡ್, ಕವಿತಾ ಕೃಷ್ಣನ್, ಜಿಗ್ನೆಶ್ ಮಹ್ವಾನಿ ಹಾಗೂ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.