ಪುತ್ತೂರು, ಜೂ 29 (Daijiworld News/MSP): ಚಿನ್ನದ ಸರ ಕಳ್ಳತನ ಮಾಡಲಾಗಿದೆ ಎಂದು ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮೀಪ್ರಸಾದ್ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಸಂಪ್ಯ ಠಾಣಾ ವ್ಯಾಪ್ತಿಯ ಕೌಡಿಚಾರ್ ನ ಮುಮ್ತಾಜ್ ಎಂಬವರ ಮನೆಯಿಂದ ಚಿನ್ನದ ಹಾರ ಕಳವಾಗಿದ್ದು, ಬಾಲಕಿ ಆಶಾ ಎಂಬಾಕೆ ಚಿನ್ನದ ಸರವನ್ನು ಕದ್ದಿದ್ದಾಳೆ ಎಂದು ಸಂಪ್ಯ ಪೊಲೀಸ್ ಠಾಣೆಗೆ ಮುಮ್ತಾಜ್ ದೂರು ನೀಡಿದ್ದರು. ಬಾಲಕಿ ಮುಮ್ತಾಜ್ ಎಂಬವರ ಮನೆಗೆ ಶುಕ್ರವಾರದಂದು ಹೋಗಿದ್ದು, ಆ ಬಳಿಕ ಚಿನ್ನ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೂರು ಪಡೆದ ಪೊಲೀಸರು, ಚಿನ್ನ ಕದ್ದಿದ್ದಾರೆ ಎನ್ನುವ ಆರೋಪಕ್ಕೆ ಬಡ ಕುಟುಂಬವೊಂದನ್ನು ಪೊಲೀಸ್ ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಬಾಲಕಿಗೆ ಈ ಸಂಬಂಧ ಪೊಲೀಸರು ಹಲ್ಲೆ ನಡೆಸಿದ್ದು ಬಾಲಕಿಯನ್ನು ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಚಿನ್ನ ಕದ್ದಿರುವುದನ್ನು ಒಪ್ಪಿಕೊಳ್ಳುವಂತೆ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಇತರ ಪೊಲೀಸರು ಒತ್ತಡ ಹೇರಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರಲ್ಲದೆ, ವಿದ್ಯುತ್ ಶಾಕ್ ಕೂಡಾ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮೀಪ್ರಸಾದ್, ಮೂವರನ್ನು ಅಮಾನತುಗೊಳಿಸಿದ್ದಾರೆ. ವಿಚಾರಣೆ ನೆಪದಲ್ಲಿ ತಂದೆ ತಾಯಿ ಜೊತೆ ಪೇದೆ ದಿನೇಶ್ ಹಾಗು ಹುಡುಗಿಯ ಜೊತೆ ಮಹಿಳಾ ಪೇದೆಯವರಾದ ಪ್ರಶ್ನಿತಾ ಮತ್ತು ಗಾಯತ್ರಿ ಎಂಬ ಮೂವರು ಸಿಬ್ಬಂದಿ ದುರ್ವರ್ತನೆ ತೋರಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಮಾನತುಗೊಳಿಸಿದ್ದಾರೆ.