ಕುಂದಾಪುರ,ಜೂ 29 (Daijiworld News/MSP): ಕುಂದಾಪುರ ತಾಲೂಕಿನ ಮಹತ್ವಕಾಂಕ್ಷಿ ಸಂಪರ್ಕ ಸೇತುವೆಗಳ ಬೇಡಿಕೆಯಲ್ಲಿ ಹಲವಾರು ದಶಕಗಳಿಂದ ಕೇಳಿ ಬರುತ್ತಿರುವ ಸೌಡ-ಶಂಕರನಾರಾಯಣ ಸೇತುವೆಗೆ 2018 ಜನವರಿ ೮ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಶಿಲಾನ್ಯಾಸ ನಡೆಸಿದರು. ಈ ಶಿಲಾನ್ಯಾಸದ ಬಗ್ಗೆಯೇ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಒಂದುವರೆ ವರ್ಷವಾದರೂ ಅಂದಿನ ಮುಖ್ಯಮಂತ್ರಿಗಳು ಶಿಲಾನ್ಯಾಸ ನಡೆಸಿದ ಸೇತುವೆ ಕಾಮಗಾರಿಯೇ ನಡೆದಿಲ್ಲ. ವಿಶೇಷ ಎಂದರೆ ಅಂದು ಸೇತುವೆಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎನ್ನಲಾಗುತ್ತಿದೆ. ತಾಂತ್ರಿಕ ಕಾರಣಗಳ ನೆಪದಿಂದ ಸೌಡ ಶಂಕರನಾರಾಯಣ ಸೇತುವೆ ಮರೀಚಿಕೆಯಾಗಿಯೇ ಉಳಿದಿದೆ.
ಹಲವಾರು ವರ್ಷಗಳಿಂದ ಸೌಢ-ಶಂಕರನಾರಾಯಣ ಸೇತುವೆಯಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇತ್ತು. ಸೇತುವೆ ಬೇಡಿಕೆಗಾಗಿ ಹೋರಾಟಗಳು ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. ಅರ್ಜಿ ಸಮಿತಿಯಲ್ಲಿಯೂ ಈ ವಿಚಾರ ಪ್ರಸ್ಥಾಪವಾಗಿದೆ. ಇಂದು ಸೇತುವೆ ಆಗುತ್ತದೆ, ನಾಳೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ಜನ ದಿನ ದೂಡುತ್ತಿದ್ದರೆ ಕಳೆದ ವರ್ಷ ಶಿಲಾನ್ಯಾಸಗೊಂಡಾಗ ದೊಡ್ಡ ಮಟ್ಟದಲ್ಲಿ ಸೇತುವೆ ಇನ್ನೇನು ಆಗಿಯೇ ಬಿಟ್ಟಿತು ಎಂದು ಜನ ಸಂಭ್ರಮ ಪಟ್ಟಿದ್ದರು. ಆದರೆ ಅದೆಲ್ಲ ಬರೋ ಓಳಾಗಿ ಉಳಿದುಕೊಂಡಿದೆ. ಜನರಲ್ಲಿಯೂ ಸೇತುವೆ ಬಗ್ಗೆ ನಿರೀಕ್ಷೆಗಳು ದೂರವಾಗಿವೆ.
ಈ ಸೇತುವೆ ನಿರ್ಮಾಣದ ಹೋರಾಟ ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಸೇತುವೆಗಾಗಿ ಹೋರಾಟ ನಡೆಯುತ್ತಲೇ ಇತ್ತು. ಹಿಂದೆ ಜನ್ನಾಡಿ ಕಡೆಯಿಂದ ಶಂಕರನಾರಾಯಣ ಕ್ಕೆ ಬರಲು ದೋಣಿಯ ವ್ಯವಸ್ಥೆ ಇತ್ತು. ಆದರೆ ಅದೂ ಈಗ ಇಲ್ಲವಾಗಿದೆ. ಸೌಡ ಸೇತುವೆ ನಿರ್ಮಾಣವಾದರೆ ಶಂಕರನಾರಾಯಣಕ್ಕೆ ಬರಲು ಮೊಳಹಳ್ಳಿ, ಜಪ್ತಿ, ಹೊಂಬಾಡಿ-ಮಂಡಾಡಿ, ಯಡ್ಯಾಡಿ ಮತ್ಯಾಡಿ, ಕೊರ್ಗಿ, ಹೆಸಕುತ್ತೂರು ಮೊದಲಾದ ಭಾಗಗಳಿಂದ ಬರುವ ಜನರಿಗೆ ಅನುಕೂಲವಾಗಲಿದೆ. ಶಂಕರನಾರಾಯಣವೂ ನಾಗರಿಕ ಸೌಲಭ್ಯಗಳಿಂದ ಬೆಳೆಯುತ್ತಿದ್ದು ಈ ಸೇತುವೆ ನಿರ್ಮಾಣವಾದರೆ ಹಲವು ಗ್ರಾಮಗಳನ್ನು ಹತ್ತಿರದಿಂದ ಸಂದಿಸಲು ಅನುಕೂಲವಾಗುತ್ತದೆ. ಈ ಎಲ್ಲ ವಿಚಾರಗಳಿಂದ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕೇಂದ್ರ ರಸ್ತೆ ಸಭಿವೃದ್ದಿ ನಿಧಿಯಿಂದ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಕೂಡಾ ನಂತರ ತಾಂತ್ರಿಕ ಕಾರಣಗಳಿಂದ ಅದು ರದ್ದುಗೊಂಡಿತ್ತು. ಕಳೆದ ವರ್ಷದ ಶಿಲಾನ್ಯಾಸವೂ ಹುಸಿಯಾಗಿತ್ತು. ಒಟ್ಟಾರೆಯಾಗಿ ಸೌಡ-ಶಂಕರನಾರಾಯಣಕ್ಕೆ ಸೇತುಭಾಗ್ಯವೇ ಇಲ್ಲವೇ ಎನ್ನುವ ಅನುಮಾನ ಕಾಡತೊಡಗಿದೆ.
ಮೊಳಹಳ್ಳಿ, ಜನ್ನಾಡಿ, ಬಿದ್ಕಲ್ಕಟ್ಟೆ ಮೊದಲಾದ ಭಾಗದ ಜನರು ಶೈಕ್ಷಣಿಕ, ಕಂದಾಯ, ಆರಕ್ಷಕ ಮುಂತಾದ ಇಲಾಖೆಗಳಿಗೆ ಹೋಗಬೇಕಿದ್ದರೆ ಶಂಕರನಾರಾಯಣಕ್ಕೆ ಹೋಗಬೇಕು. ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಉಪ ನೊಂದಣಾಧಿಕಾರಿಗಳ ಕಛೇರಿ, ಪೊಲೀಸ್ ಠಾಣೆ ಮುಂತಾದ ಪ್ರಮುಖ ಕಛೇರಿಗಳು ಶಂಕರನಾರಾಯಣದಲ್ಲಿದೆ. ನೂತನ ತಾಲೂಕು ಬೇಡಿಕೆಯೂ ಶಂಕರನಾರಾಯಣಕ್ಕೆ ಇದೆ. ಬಹು ಮುಖ್ಯವಾಗಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕಾಲೇಜು ವಿದ್ಯಾರ್ಥಿಗಳು ಈಗ ಶಂಕರನಾರಾಯಣ ಕಾಲೇಜಿಗೆ ಹೋಗಲು ಹಾಲಾಡಿ ಮೂಲಕ ಸುತ್ತು ಬಳಸಿ ಹೋಗಬೇಕು. ಪುರಾಣ ಪ್ರಸಿದ್ಧ ಶಂಕರನಾರಾಯಣ ದೇವಸ್ಥಾನಕ್ಕೆ ಪ್ರತೀ ಸೋಮವಾರ ಸಾಕಷ್ಟು ಸಂಖ್ಯೆಯಲ್ಲಿ ಜನ ಶಂಕರನಾರಾಯಣಕ್ಕೆ ಬರುತ್ತಾರೆ. ಸೌಡದಲ್ಲಿ ಸೇತುವೆ ನಿರ್ಮಾಣವಾಗುವುದರಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಲಿದೆ.
ಸೌಡ, ಮೊಳಹಳ್ಳಿ, ಜನ್ನಾಡಿ ಮೊದಲಾದ ಭಾಗದ ಜನರು ಈಗ ಹಾಲಾಡಿ ಮೂಲಕವೇ ಸಂಪರ್ಕ ಪಡೆಯಬೇಕು. ಸೌಡದಲ್ಲಿ ಸೇತುವೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸೇತುವೆ ಪ್ರಸ್ತಾವಿತ ಪ್ರದೇಶ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಸೇತುವೆ ನಿರ್ಮಾಣದ ನಂತರ ಈ ಭಾಗದ ಅಭಿವೃದ್ದಿಗೂ ಪೂರಕವಾಗಲಿದೆ. ಈಗಾಗಲೇ ನೂರಾರು ಬಾರಿ ಈ ಭಾಗದ ಜನರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಂಬಂಧಪಟ್ಟವರಿಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸೇತುವೆ ಬಗ್ಗೆ ಪ್ರಯತ್ನಗಳನ್ನು ಮಾಡುತ್ತ ಇದ್ದರೂ ಕೂಡಾ ಸೇತುವೆ ಬೇಡಿಕೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.
ಈಗಲೂ ಕೂಡ ಮತ್ತೆ ತಾಂತ್ರಿಕ ಅಡಚಣೆ ಈ ಸೇತುವೆ ನಿರ್ಮಾಣಕ್ಕೆ ಎದುರಾಗಿದೆ ಎನ್ನಲಾಗಿದೆ. ಎದುರಾಗಿರುವ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಿಕೊಂಡು ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬುದ್ಧಿವಂತಿಕೆ ತಳೆಯಬೇಕಾಗಿದೆ.