ಮಂಗಳೂರು,ಜೂ 29 (Daijiworld News/MSP): ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಯುವಕನೊಬ್ಬ ವಿದ್ಯಾರ್ಥಿನಿಗೆ ಇರಿದು ಬಳಿಕ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಯುವತಿಯ ಹತ್ಯೆಗೆ ಯತ್ನಿಸಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಾರ್ಕಳದ ನಿಟ್ಟೆಯಲ್ಲಿ ಎಂಬಿಎ ವಿದ್ಯಾರ್ಥಿನಿಯಾಗಿದ್ದ ದೇರಳಕಟ್ಟೆ ಬಗಂಬಿಲದ ನಿವಾಸಿ ದೀಕ್ಷಾ (20) ಎಂಬಾಕೆಯ ಮೇಲೆ ನಗರದ ಶಕ್ತಿನಗರದ ರಾಮಶಕ್ತಿ ಮಿಷನ್ ಬಳಿಯ ನಿವಾಸಿ ಸುಶಾಂತ್ (28) ಎಂಬಾತ ಚೂರಿಯಿಂದ ಇರಿದು ಆಕೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ. ವಿದ್ಯಾರ್ಥಿನಿ ಕಾಲೇಜು ಮುಗಿಸಿ ರಸ್ತೆಯಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿತ್ತು.
ದೀಕ್ಷಾ ಎಂದಿನಂತೆ ದೇರಳಕಟ್ಟೆಯ ಕ್ಷೇಮಾ ಬಸ್ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಯ ಹಿಂಭಾಗದಲ್ಲಿರುವ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಹಿಂದಿನಿಂದ ಬಂದ ಸುಶಾಂತ್ ಇದ್ದಕ್ಕಿದ್ದಂತೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಸ್ಥಳೀಯರು ಆತನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ತನ್ನ ಕುತ್ತಿಗೆ ಕೊಯ್ದು ಬೆದರಿಸಿದ್ದ.
ಆಕೆಯನ್ನು ಅಡ್ಡಗಟ್ಟಿದ್ದ ಆತ ೧೨ ಬಾರಿ ಇರಿದಿದ್ದ. ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ನರಳುತ್ತಿದ್ದರೂ, ಕನಿಕರ ತೋರದ ಆರೋಪಿ ಆಕೆಯನ್ನು ಪ್ರಶ್ನಿಸುತ್ತಲೇ 12 ಬಾರಿ ಮನಬಂದಂತೆ ಇರಿದ್ದ. ಸ್ಥಳದಲ್ಲಿ ಇದ್ದವರನ್ನು ಕಂಡು ಬನ್ನಿ ಬನ್ನಿ ಎಂದು ಕೈ ಸನ್ನೆ ಮಾಡಿ ಬೆದರಿಸುತ್ತಲೇ ತನ್ನ ಕುತ್ತಿಗೆಯನ್ನು ಕುಯ್ದುಕೊಂಡಿದ್ದಾನೆ.
ಸ್ಥಳೀಯರು ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಿದ್ಯಾರ್ಥಿನಿ ದೀಕ್ಷಾ, ಎದೆ, ಹೊಟ್ಟೆ, ಕುತ್ತಿಗೆ ಕೈ ಕಾಲುಗಳು ಸೇರಿದಂತೆ ದೇಹದ 10-12 ಕಡೆ ಮಾರಕವಾಗಿ ಇರಿದ ಪರಿಣಾಮ ಹೃದಯ, ಕರುಳು ವಿಪರೀತಿ ಹಾನಿಯಾಗಿದೆ. ಗಂಭೀರ ಗಾಯಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ದೀಕ್ಷಾಳನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಡಾ. ಸಂದೀಪ್ ಪಾಟೀಲ್, ಎಸಿಪಿ ರಾಮರಾವ್, ಉಳ್ಳಾಲ ಇನ್ಸ್ಪೆಕ್ಟರ್ ಗೋಪಿಕೃಷ್ಣ ಮತ್ತು ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆಗೂ ಮೊದಲು, ಏಪ್ರಿಲ್ 24, 2019 ರಂದು ದೀಕ್ಷಾ ಬಳಿ ಆತ ಕೆಟ್ಟದಾಗಿ ವರ್ತಿಸಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದ ಸುಶಾಂತ್ ವಿರುದ್ಧ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸುಶಾಂತ್ ಡ್ಯಾನ್ಸ್ ಕ್ಲಾಸ್ ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದು ಅಲ್ಲಿಗೆ ನೃತ್ಯಾಭ್ಯಾಸಕ್ಕಾಗಿ ದೀಕ್ಷಾ ಆಗಮಿಸಿದ್ದಾಗ ಸುಶಾಂತ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಜತೆಗಿರುವ ಪೋಟೋಗಳು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಆಗಿದೆ. ಆದರೆ ಕಳೆದ ಹಲವು ತಿಂಗಳಿನಿಂದ ಯುವತಿ ವಿಮುಖಳಾಗಿದ್ದರೂ ಯುವಕ ಏಕಮುಖವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.