ಮಂಗಳೂರು, ಜೂ29(Daijiworld News/SS): ಬಿಜೆಪಿ ನಾಯಕರಿಗೆ ಗ್ರಾಮ ವಾಸ್ತವ್ಯದ ಅರಿವಿಲ್ಲದೆ ಮುಖ್ಯಮಂತ್ರಿಗಳು ಅಭಿವೃದ್ಧಿಯ ಚಿಂತನೆಯಿಂದ ನಡೆಸುವ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10 ಕೋಟಿ ವೆಚ್ಚದಲ್ಲಿ ಮೂಲ್ಕಿಯಲ್ಲಿ ಮಿನಿವಿಧಾನ ಸೌಧ ಆಗಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಇದು ತಲೆ ಎತ್ತಿ ನಿಲ್ಲಲಿದೆ. ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಹಾಗೂ ಕಂದಾಯ ಅದಾಲತ್ನ ವಿಶೇಷ ಅಂದೋಲನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಭಿವೃದ್ಧಿ ದೃಷ್ಟಿಯಿಂದ 36 ಕೋಟಿ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ನೀಡಲಾಗುವುದು. ಪ್ರತೀ ಜಿಲ್ಲಾ ಪಂಚಾಯಿತಿಗೆ ಸುಮಾರು 85 ಲಕ್ಷ ಸಿಗುವ ಸಂಭವವಿದೆ ಎಂದು ಹೆಳಿದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆದಾಯ ಹಾಗೂ ಜಾತಿ ಸರ್ಟಿಫಿಕೇಟ್ಗಳನ್ನು ತ್ವರಿತ ವಿಲೇವಾರಿ ಮಾಡಲು ಗ್ರಾಮ ಕರಣಿಕರಿಗೆ ಸೂಚಿಸಲಾಗಿದೆ. ತೋಕೂರು ಕೆರೆಗೆ 2 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.