ಕುಂದಾಪುರ, ಜೂ 28 (Daijiworld News/SM): ವರ್ಷದ ಹಿಂದೆ ಕುಡಿದ ಅಮಲಿನಲ್ಲಿ ಹಣಕ್ಕಾಗಿ ಸಹೋದರಿಯನ್ನು ಪೀಡಿಸಿದ್ದಲ್ಲದೇ ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿ ಬಳಿಕ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ಘೋಷಿಸಿದ್ದಾರೆ.
2018ರ ಜುಲೈ 22ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಎಂಬ ಮಹಿಳೆಯ ಮೇಲೆ ಆಕೆಯ ತಮ್ಮ ಅಣ್ಣಪ್ಪ ಭಂಡಾರಿ (45) ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಣ್ಣಪ್ಪ ಭಂಡಾರಿಯ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ವಿಚಾರಣೆ ಮುಂದುವರೆಸಿತ್ತು.
ಆರೋಪಿಯು ಕುಂದಾಪುರದಲ್ಲಿ ಕ್ಷೌರದ ಅಂಗಡಿಯನ್ನಿಟ್ಟುಕೊಂಡಿದ್ದು, ಕುಡಿತದ ಚಟ ಹೊಂದಿದ್ದ ಎಂದು ತಿಳಿದು ಬಂದಿದೆ. ಕುಡಿತಕ್ಕೆ ಹಣ ಸಾಲದೇ ಇದ್ದಾಗಲೆಲ್ಲ ಅಕ್ಕ ವಿಜಯಾ ಭಂಡಾರಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. 2018ರ ಜುಲೈ 22ರಂದು ರಾತ್ರಿ ಮನೆಗೆ ಬಂದಿದ್ದ ಅಣ್ಣಪ್ಪ ಭಂಡಾರಿ ಅಕ್ಕ ವಿಜಯಾಳ ಜೊತೆ ಹಣದ ಬೇಡಿಕೆ ಇಟ್ಟಿದ್ದ. ಆದರೆ ಅಕ್ಕ ಕೊಡಲು ಹಣ ಇಲ್ಲ ಎಂದಾಗ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು.
ಇದೇ ಸಂದರ್ಭ ಮನೆಯ ಮೂಲೆಯಲ್ಲಿದ್ದ ಕತ್ತಿಯಿಂದ ಅಕ್ಕ ವಿಜಯಾಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಿಜಯಾ ಚಿಕಿತ್ಸೆ ಫಲಕಾರಿಯಾಗದೇ ಜುಲೈ 28ರಂದು ಮೃತಪಟ್ಟಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧಿ ಅಣ್ಣಪ್ಪ ಭಂಡಾರಿಗೆ ಜೀವಾವಧಿ ಶಿಕ್ಷೆ, 40 ಸಾವಿರ ರೂಪಾಯಿ ದಂಡ, ತಪ್ಪಿದಲ್ಲಿ 4 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.