ಮಂಗಳೂರು,ಜೂ 28 (Daijiworld News/MSP): ನಗರದ ಗ್ರಾಮಾಂತರ ಠಾಣಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೂರಿನ ಉದ್ದಬೆಟ್ಟು ಸಮೀಪದಲ್ಲಿ ಎರಡು ತಿಂಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣದ ಆರೋಪಿಯೊಬ್ಬನನ್ನು ದಕ್ಷಿಣ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಅನ್ಸರ್ ಉಳಾಯಿಬೆಟ್ಟು ಎಂದು ಗುರುತಿಸಲಾಗಿದೆ.
ಅನ್ಸರ್ ಮಲ್ಲೂರಿನಲ್ಲಿ ಎರಡು ತಿಂಗಳ ಹಿಂದೆ ಉದ್ದಬೆಟ್ಟುವಿನ ದಾವುದ್ ಅಲಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಝಾಮ್ (23) ಎಂಬಾತನನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.
ರೌಡಿ ಅನ್ಸರ್ ಮೇಲೆ ಈ ಪ್ರಕರಣವಲ್ಲದೆಮಂಗಳೂರು ಗ್ರಾಮಾಂತರ ಠಾಣೆಯೊಂದರಲ್ಲೇ ದನಕಳ್ಳತನ, ಕೊಲೆಯತ್ನ ಸೇರಿದಂತೆ ಏಳು ಪ್ರಕರಣಗಳಿದ್ದು, 2012ರಿಂದ ತಲೆಮರೆಸಿಕೊಂಡಿದ್ದ. ಆರೋಪಿಗಾಗಿ ಹಲವು ಸಮಯದಿಂದ ಶೋಧ ನಡೆಸುತ್ತಿದ್ದರು. ಮಂಗಳೂರು ಸಮೀಪದ ಕಣ್ಣೂರು ಬಳಿಯಿರುವ ಬಗ್ಗೆ ಮಾಹಿತಿ ನಡೆದ ಗ್ರಾಮಾಂತರ ಪೊಲೀಸರು ರೌಡಿ ನಿಗ್ರಹದಳದ ಜತೆಗೂಡಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.