ಮಂಗಳೂರು, ಜೂ 28 (Daijiworld News/MSP): ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣುಮಕ್ಕಳ ಮದುವೆಗೆ ನೆರವು ನೀಡಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ, 'ಶಾದಿ ಭಾಗ್ಯ' (ಬಿದಾಯಿ)ವನ್ನು 'ಮದುವೆ ಭಾಗ್ಯ'ವಾಗಿ ಬದಲಾಯಿಸುವಂತೆ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಭರತ್ ಶೆಟ್ಟಿ ವೈ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಟ್ವೀಟ್ ಮಾಡಿರುವ ಶಾಸಕ ಭರತ್ ವೈ ಶೆಟ್ಟಿ, ಧರ್ಮ ತಾರತಮ್ಯ ತೊರೆಯುವಂತೆ ತಿಳಿಸಿದ್ದಾರೆ.
" ಗ್ರಾಮ ವಾಸ್ತವ್ಯದ ಕೈಗೊಂಡಿರುವ ಸಂದರ್ಭ ಮುಖ್ಯಮಂತ್ರಿಗಳಾಗಿರುವ ನಿಮಗೆ ಗ್ರಾಮೀಣ ಪ್ರದೇಶದ ಬಡ ಹಿಂದೂ ಹುಡುಗಿಯರ ಭವಿಷ್ಯ ಯಾವ ರೀತಿಯಾಗಿರಬಹುದು ಎಂದು ನೀವು ಅರಿತುಕೊಂಡಿರಬಹುದು. ಎಲ್ಲಾ ವರ್ಗದವರ ಸಬಲೀಕರಣವನ್ನು ನೀವು ನಿಜವಾಗಿಯೂ ನಂಬಿದರೆ, ತಾರತಮ್ಯದ ತೊರೆದು 'ಶಾದಿ ಭಾಗ್ಯ'ವನ್ನು (ಅಲ್ಪಸಂಖ್ಯಾತರಿಗೆ ಮಾತ್ರ ಇರುವ ) 'ಮದುವೆ ಭಾಗ್ಯ'ವಾಗಿ ಬದಲಾಯಿಸಿ. ಹಾಗೂ ಇದರಲ್ಲಿ ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಧರ್ಮೀಯರನ್ನು ಸೇರಿಸಿ" ಎಂದು ಒತ್ತಾಯಿಸಿದ್ದಾರೆ.
ಏನಿದು ಯೋಜನೆ: 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯದ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ತಲಾ 50 ಸಾವಿರ ನೆರವು ನೀಡುವ ‘ಶಾದಿ ಭಾಗ್ಯ’ ಯೋಜನೆ ಆರಂಭಿಸಿದ್ದರು. 'ಶಾದಿಭಾಗ್ಯ' ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತಿದ್ದ ಸರ್ಕಾರ, ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳು, ವಿಧವೆಯರು, ವಿಚ್ಛೇದಿತರಿಗೂ ಈ ಯೋಜನೆಯನ್ನು ವಿಸ್ತರಿಸಿತ್ತು.